ADVERTISEMENT

ರೋಟರಿಯಿಂದ ₹ 1 ಕೋಟಿ ಒಡಂಬಡಿಕೆ

ಶತಮಾನ ಪೂರೈಸಿರುವ ಅತ್ತಿಬೆಲೆ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 12:02 IST
Last Updated 29 ಆಗಸ್ಟ್ 2016, 12:02 IST
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬೆಂಗಳೂರು ದಕ್ಷಿಣ ಇನ್ನರ್‌ವೀಲ್ ಕ್ಲಬ್ ಹಾಗೂ ಅತ್ತಿಬೆಲೆ–ಸರ್ಜಾಪುರ ರೋಟರಿ ಕ್ಲಬ್ ಸಹಯೋಗದಲ್ಲಿ ಶತಮಾನ ಪೂರೈಸಿರುವ ಅತ್ತಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದ ಜೀರ್ಣೋದ್ದಾರದ ಸಂಬಂಧ ಒಡಂಬಡಿಕೆ ಪತ್ರವನ್ನು ಶಿಕ್ಷಣಾಧಿಕಾಡಿ ಡಿ.ಆರ್.ರಾಮಮೂರ್ತಿ ಅವರಿಗೆ ನೀಡಲಾಯಿತು
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬೆಂಗಳೂರು ದಕ್ಷಿಣ ಇನ್ನರ್‌ವೀಲ್ ಕ್ಲಬ್ ಹಾಗೂ ಅತ್ತಿಬೆಲೆ–ಸರ್ಜಾಪುರ ರೋಟರಿ ಕ್ಲಬ್ ಸಹಯೋಗದಲ್ಲಿ ಶತಮಾನ ಪೂರೈಸಿರುವ ಅತ್ತಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದ ಜೀರ್ಣೋದ್ದಾರದ ಸಂಬಂಧ ಒಡಂಬಡಿಕೆ ಪತ್ರವನ್ನು ಶಿಕ್ಷಣಾಧಿಕಾಡಿ ಡಿ.ಆರ್.ರಾಮಮೂರ್ತಿ ಅವರಿಗೆ ನೀಡಲಾಯಿತು   

ಆನೇಕಲ್‌: ತಾಲ್ಲೂಕಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಒಂದು ಕೋಟಿಗೂ ಹೆಚ್ಚು ವೆಚ್ಚದ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ ನುಡಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಬೆಂಗಳೂರು ದಕ್ಷಿಣ ಇನ್ನರ್‌ವೀಲ್ ಕ್ಲಬ್ ಹಾಗೂ ಅತ್ತಿಬೆಲೆ–ಸರ್ಜಾಪುರ ರೋಟರಿ ಕ್ಲಬ್ ಸಹಯೋಗದಲ್ಲಿ ಶತಮಾನ ಪೂರೈಸಿರುವ ಅತ್ತಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದ ಜೀರ್ಣೋದ್ದಾರದ ಸಂಬಂಧ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡು ಮಾತನಾಡಿದರು.

ನೂರು ವರ್ಷ ಪೂರೈಸಿರುವ ಪಾರಂಪರಿಕ ಕಟ್ಟಡವನ್ನು ಅದೇ ಶೈಲಿಯಲ್ಲಿ ಅಭಿವೃದ್ದಿ ಪಡಿಸುವ ದಿಸೆಯಲ್ಲಿ ಇನ್ನರ್‌ವೀಲ್ ಸಂಸ್ಥೆ ಅಂದಾಜು ₹ 30 ಲಕ್ಷ ವೆಚ್ಚದಲ್ಲಿ ಆರು ತಿಂಗಳಲ್ಲಿ ಅಭಿವೃದ್ದಿ ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ತಾಲ್ಲೂಕಿನ ಲಕ್ಷ್ಮೀಪುರ, ನಂಜಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಶಿಥಿಲ ವಾಗಿರುವುದರಿಂದ ₹ 60 ಲಕ್ಷ  ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ರೋಟರಿ  ಕ್ಲಬ್ ಒಡಂಬಡಿಕೆ ಮಾಡಿಕೊಂಡಿದೆ. ಸಕಲವಾರದಲ್ಲಿ ಸರ್ಕಾರಿ ಶಾಲೆಗೆ ಕಟ್ಟಡ ನಿರ್ಮಿಸಿಕೊಟ್ಟಿದೆ. ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೊಡುಗೆ ನೀಡಬೇಕು ಎಂದರು.

ಬೆಂಗಳೂರು ದಕ್ಷಿಣ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರೇಖಾ ಶ್ರೀಧರ್ ಮಾತನಾಡಿ ಅತ್ಯಂತ ಆಕರ್ಷಣೀಯವಾಗಿರುವ ಅತ್ತಿಬೆಲೆ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲವಾಗಿದ್ದು ಬಳಕೆಗೆ ಯೋಗ್ಯವಾಗಿಲ್ಲ. ನೂರು ವರ್ಷ ಪೂರ್ಣಗೊಂಡಿರುವ ಈ ಕಟ್ಟಡದ ವಿನ್ಯಾಸವನ್ನು ಉಳಿಸಿಕೊಂಡು ಅಭಿವೃದ್ದಿ ಪಡಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಶಾಲೆಗೆ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಅತ್ತಿಬೆಲೆ–ಸರ್ಜಾಪುರ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಅನಿವಾಸಿ ಭಾರತೀಯ ಹಾಗೂ ದಾನಿಗಳಾದ ಎಂ.ಕೃಷ್ಣಮೂರ್ತಿ, ಜಿಲ್ಲಾ ರೋಟರಿ ಸೇವಾ ವಿಭಾಗದ ಮುಖ್ಯಸ್ಥ ಶ್ರೀಧರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿಜಯಲಕ್ಷ್ಮೀ, ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾಮಣಿ, ಶಿಕ್ಷಕರಾದ ಚಂದ್ರಬಾಬು, ಬಿ.ಎಂ.ಕೋಳೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.