ADVERTISEMENT

ವಿಜಯಪುರದಲ್ಲಿ ಬೀದಿನಾಯಿ ಹಾವಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:24 IST
Last Updated 10 ಸೆಪ್ಟೆಂಬರ್ 2017, 9:24 IST
ವಿಜಯಪುರದ ಕೋಲಾರ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ ಬೀದಿಯಲ್ಲಿ ಹಿಂಡಾಗಿ ಕಚ್ಚಾಟದಲ್ಲಿ ತೊಡಗಿದ್ದ ಬೀದಿನಾಯಿಗಳು
ವಿಜಯಪುರದ ಕೋಲಾರ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ ಬೀದಿಯಲ್ಲಿ ಹಿಂಡಾಗಿ ಕಚ್ಚಾಟದಲ್ಲಿ ತೊಡಗಿದ್ದ ಬೀದಿನಾಯಿಗಳು   

ವಿಜಯಪುರ: ಬೀದಿ ನಾಯಿಗಳ ಹಾವಳಿಯಿಂದಾಗಿ ಜನರು ನೆಮ್ಮದಿಯಿಂದ ಜೀವನ ನಡೆಸಲು ಕಷ್ಟವಾಗಿದ್ದು, ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ವೇಣು ಒತ್ತಾಯಿಸಿದ್ದಾರೆ.

ಪ್ರತಿಯೊಂದು ಬೀದಿಗಳಲ್ಲೂ ಹಿಂಡು ಹಿಂಡಾಗಿ ಸಂಚರಿಸುವ ಬೀದಿ ನಾಯಿಗಳು, ಮಕ್ಕಳು, ಮಹಿಳೆಯರು, ವೃದ್ಧರು ಓಡಾಡುವುದು ಕಷ್ಟವಾಗಿದೆ. ಪುರಸಭೆಯಿಂದ ಪ್ರತಿವರ್ಷ ಬೀದಿನಾಯಿಗಳ ಸಂತಾನಶಕ್ತಿ ಹರಣಕ್ಕಾಗಿ, ನಾಯಿಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಆದರೂ ಇಲ್ಲಿನ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ ಎಂದಿದ್ದಾರೆ.

ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಮಾಂಸ ಮಾರಾಟದ ಅಂಗಡಿಗಳ ಮುಂದೆ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಬೀದಿನಾಯಿಗಳು, ಶಾಲಾ ಮಕ್ಕಳ ಮೇಲೆ ಎರಗುತ್ತಿವೆ ಎಂದಿದ್ದಾರೆ.

ADVERTISEMENT

ಚುನಾಯಿತ ಸದಸ್ಯರೂ ಇದರ ಕುರಿತು ಗಮನ ಹರಿಸುತ್ತಿಲ್ಲ. ಜನರ ಪರದಾಟವಂತೂ ಹೆಚ್ಚುತ್ತಲೇ ಇದೆ. ಪುರಸಭೆಯವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೋ ಅಥವಾ ಪ್ರಾಣಿ ದಯಾ ಸಂಘದವರೇ ಅಡ್ಡಿ ಪಡಿಸುತ್ತಾರೋ ತಿಳಿಯದಾಗಿದೆ ಎಂದು ಸ್ಥಳೀಯರಾದ ಲೊಕೇಶ್, ಶಿವಕುಮಾರ್, ನಾಗರಾಜ್ ಮುಂತಾದವರು ಆರೋಪಿಸಿದ್ದಾರೆ.

ದೇವನಹಳ್ಳಿ ರಸ್ತೆಯ ಜಂಗ್ಲಿ ಪೀರ್ ಬಾಬಾ ದರ್ಗಾ ಬಳಿ ವೃದ್ಧರೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಅವರ ಎರಡೂ ಕಣ್ಣುಗಳನ್ನು ಕಿತ್ತು ತಿಂದು ಹಾಕಿದ್ದವು, ನಾಯಿ ಕಡಿತಕ್ಕೆ ಒಳಗಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

ರಸ್ತೆಗಳಲ್ಲಿ ದ್ವಿಚಕ್ರ ವಾಹನ ಮತ್ತಿತರೆ ವಾಹನಗಳ ಹಿಂದೆ ಬೀದಿ ನಾಯಿಗಳು ಓಡಿಸಿಕೊಂಡು ಹೋಗುತ್ತಿವೆ. ಅಡ್ಡ ಬರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಬೆಳಗಿನ ಸಮಯದಲ್ಲಿ ಹಾಲು, ಪೇಪರ್ ತರುವವರಿಗಂತೂ ನಾಯಿಗಳಿಂದ ರಕ್ಷಣೆ ಮಾಡಿಕೊಳ್ಳಲು ಹೆಣಗಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ನಿರಂತರವಾಗಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾದ ಸಾರ್ವಜನಿಕರು ಬರುವುದು ಹೆಚ್ಚಾಗುತ್ತಿದ್ದಾರೆ. ಪುರಸಭೆಯವರು ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ವಹಿಸುವಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.