ADVERTISEMENT

ವಿಜಯಪುರ ಜನತೆಗೆ ಅನ್ಯಾಯ ಸರ್ಕಾರಕ್ಕೆ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 9:37 IST
Last Updated 1 ಸೆಪ್ಟೆಂಬರ್ 2017, 9:37 IST

ವಿಜಯಪುರ: ‘ಒಲಿದರೆ ನಾರಿ..ಮುನಿದರೆ ಮಾರಿ..ವಿಜಯಪುರದ ಜನತೆಗೆ ನ್ಯಾಯ ಕೊಡದ ಸರ್ಕಾರಕ್ಕೆ ಧಿಕ್ಕಾರ..ಮಹಿಳೆಯರನ್ನು ಕಡೆಗಣಿಸುತ್ತಿರುವ ಜನಪ್ರತಿನಿಧಿಗಳಿಗೆ ಧಿಕ್ಕಾರ..’ಎನ್ನುವ ಘೋಷಣೆಗಳೊಂದಿಗೆ ವಿಜಯಪುರ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ವಿಜಯಪುರ ತಾಲ್ಲೂಕಿಗಾಗಿ ಹೋರಾಟ ನಡೆಸಿದರು.

ಇಲ್ಲಿನ ಶಿವಗಣೇಶ ವೃತ್ತದಲ್ಲಿ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯಿಂದ ನಡೆಯುತ್ತಿರುವ 17 ನೇ ದಿನದ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ, ಹೋರಾಟ ನಡೆಸಿದರು.

‘17 ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ನಿರಂತರವಾಗಿ ಬೆಂಬಲ ವ್ಯಕ್ತಪಡಿಸುತ್ತಿವೆ’ ಎಂದರು.‘ಹಿಂದೆ ತಾಲ್ಲೂಕಿಗಾಗಿ ಒತ್ತಾಯಿಸಿ, ಹೋರಾಟಗಳು ನಡೆದಿವೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿಗಳನ್ನೂ ಕೊಟ್ಟಿದ್ದೇವೆ.

ADVERTISEMENT

ವಿಜಯಪುರ ಬಂದ್ ಮಾಡುವ ಮೂಲಕ ವಿಜಯಪುರದ ಜನತೆ ಒತ್ತಾಯ ಮಾಡಿದ್ದಾರೆ. ಆದರೂ ಸರ್ಕಾರದ ಪ್ರತಿನಿಧಿಗಳು ಬಂದು ನಮ್ಮ ಮನವಿಯನ್ನು ಆಲಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರ ಬಿ.ಕೆ.ಶಿವಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿರುವ 49 ತಾಲ್ಲೂಕುಗಳನ್ನು ಅಭಿವೃದ್ಧಿಯನ್ನು ಗಮನದಲ್ಲಿಕೊಂಡು ಮಾಡಿಲ್ಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕೆನ್ನುವ ಉದ್ದೇಶದಿಂದ ಮಾಡಿದೆ’ ಎಂದರು.

ಕಂದಾಯಾಧಿಕಾರಿ ಕುಮಾರ್ ಅವರ ಮೂಲಕ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಹೋರಾಟಗಾರರಾದ ಮಹೇಶ್ ಕುಮಾರ್, ವಿ.ರಾ.ಶಿವಕುಮಾರ್, ಬಿ.ಎಸ್.ಪ್ರವೀಣ್ ಕುಮಾರ್, ಎನ್.ದೇವರಾಜ್, ಬಾಬಾಜಾನ್, ಗೋವಿಂದರಾಜು, ಕೆ.ಸದಾಶಿವಯ್ಯ,ಐ ಯಲುವಹಳ್ಳಿ ಅಶೋಕ್, ಮುನಿವೆಂಕಟ ರವಣಪ್ಪ, ನಾಗೇಶ್, ರತ್ನಮ್ಮ, ಭಾಗ್ಯ, ಮಂಜುಳಾ, ರಾಧ, ಚನ್ನವೀರಮ್ಮ, ಶಬಾನಾ, ಜಾಹೇದಾ, ಮಂಜುಳ, ಭಾರತಿ, ಸರೋಜ, ಶಾರದಮ್ಮ, ಕಮಲ, ರಾಜಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.