ADVERTISEMENT

ವಿಜಯಪುರ ತಾಲ್ಲೂಕು: 28ರಂದು ಘೋಷಣೆ ಭರವಸೆ

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:35 IST
Last Updated 18 ಜುಲೈ 2017, 7:35 IST

ವಿಜಯಪುರ: ‘ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು  ಅಗತ್ಯವಾಗಿರುವ ಅಂಕಿ ಅಂಶಗಳನ್ನು ತರಿಸಿಕೊಂಡಿದ್ದು, ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಜುಲೈ 28 ರಂದು ದೇವನಹಳ್ಳಿಗೆ ಬಂದಾಗ ಘೋಷಣೆ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ’  ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಸ್ವ ಗೃಹದಲ್ಲಿ ಭಾನುವಾರ ಭೇಟಿಯಾಗಿದ್ದ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳು, ಹಾಗೂ ಶಾಸಕ ಪಿಳ್ಳಮುನಿಶಾಮಪ್ಪ, ಹಿರಿಯ ಮುಖಂಡ ಸಿ.ನಾರಾಯಣಸ್ವಾಮಿ,  ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ಅವರು ಭರವಸೆ ನೀಡಿದರು.

‘ಐತಿಹಾಸಿಕ ಹಿನ್ನೆಲೆಯುಳ್ಳ ವಾಣಿಜ್ಯ ಕೇಂದ್ರವಾಗಿರುವ ವಿಜಯಪುರವು ತಾಲ್ಲೂಕು ಕೇಂದ್ರವಾಗಲಿಕ್ಕೆ ಎಲ್ಲಾ ಅರ್ಹತೆಗಳನ್ನು ಹೊಂದಿಕೊಂಡಿದೆ. ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆನ್ನುವ ಒತ್ತಾಯವನ್ನು ಮಂಡಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.

ADVERTISEMENT

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಪುರಸಭೆಗಳನ್ನು ಹೊಂದಿರುವ ಏಕೈಕ ತಾಲ್ಲೂಕು ದೇವನಹಳ್ಳಿಯಾಗಿದ್ದು, ಶಾಸಕರ ಅನುದಾನದಲ್ಲಿ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.

ಸಿ.ನಾರಾಯಣಸ್ವಾಮಿ ಮಾತನಾಡಿ, ‘ಜನರ ಸಹಜವಾದ ನ್ಯಾಯಬದ್ಧವಾದ ಬೇಡಿಕೆಯನ್ನು ಈಡೇರಿಕೆ ಮಾಡುವುದರ ಜತೆಗೆ, ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿರುವ ಜವಾಬ್ದಾರಿ ಸರ್ಕಾರದ ಮೇಲಿದೆ’ ಎಂದರು.

ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಶಿವಪ್ಪ ಮಾತನಾಡಿ, ‘ಸತತವಾಗಿ ತೀವ್ರ ಮಳೆಯ ಕೊರತೆಯಿಂದಾಗಿ ನಮ್ಮ ಭಾಗದ ರೈತರು ಸೇರಿದಂತೆ ಜನರು, ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅಲ್ಪಮೊತ್ತದ ಪರಿಹಾರ ಏನೇನೂ ಸಾಕಾಗುತ್ತಿಲ್ಲ’ ಎಂದರು.

ಮುಖಂಡ ಕೆ.ವೆಂಕಟಸ್ವಾಮಿ, ಬಿ.ಚೇತನ್ ಗೌಡ, ಚಿನ್ನಪ್ಪ, ಜ್ಯೋತಿ ಬಸವರಾಜು, ನಾಗರಾಜ್, ಟಿಲ್ಲರ್ ಮಂಜುನಾಥ್, ಮಹೇಶ್ ಕುಮಾರ್ ಮಾಸ್, ವಿ.ರಾ.ಶಿವಕುಮಾರ್, ಮುನಿವೆಂಕಟರವಣಪ್ಪ, ಮುನಿರಾಜು, ಕೋಕೋಕೋಲಾ ಮಂಜುನಾಥ್, ಶ್ರೀನಿವಾಸ್,  ಜಿ.ಟಿ.ಸದಾಶಿವರೆಡ್ಡಿ, ನಾರಾಯಣಸ್ವಾಮಿ, ದೇವರಾಜಪ್ಪ, ಎನ್.ರಾಜಗೋಪಾಲ್, ಕೋರಮಂಗಲ ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ವೀರಭದ್ರಯ್ಯ, ವೇಣುಗೋಪಾಲ್, ಪ್ರವೀಣ್ ಕುಮಾರ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.