ADVERTISEMENT

ವಿಜಯಪುರ ಸುತ್ತಮುತ್ತ ಜೋಳದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 9:25 IST
Last Updated 7 ಸೆಪ್ಟೆಂಬರ್ 2017, 9:25 IST
ಭಟ್ರೇನಹಳ್ಳಿಯ ಬಳಿ ರೈತ ಮುನಿರಾಜು ಬೆಳೆದಿರುವ ಜೋಳದ ಹೊಲಕ್ಕೆ ನುಗ್ಗಿದ್ದ ಕಾಡುಹಂದಿಗಳು ಬೆಳೆ ಹಾಳು ಮಾಡಿರುವುದು
ಭಟ್ರೇನಹಳ್ಳಿಯ ಬಳಿ ರೈತ ಮುನಿರಾಜು ಬೆಳೆದಿರುವ ಜೋಳದ ಹೊಲಕ್ಕೆ ನುಗ್ಗಿದ್ದ ಕಾಡುಹಂದಿಗಳು ಬೆಳೆ ಹಾಳು ಮಾಡಿರುವುದು   

ವಿಜಯಪುರ: ಕಾಡು ಹಂದಿಗಳ ಉಪಟಳದಿಂದಾಗಿ ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆಗಳು ನಾಶವಾಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ವಿಜಯಪುರದ ರೈತ ಮುನಿರಾಜು ಒತ್ತಾಯಿಸಿದ್ದಾರೆ.

ಇಲ್ಲಿನ ಭಟ್ರೇನಹಳ್ಳಿಯ ಸಮೀಪದಲ್ಲಿರುವ ಸುಮಾರು 60 ಎಕರೆ ಪ್ರದೇಶಗಳಲ್ಲಿ ರೈತರು ಬೆಳೆದಿರುವ ವಿವಿಧ ರೀತಿಯ ಬೆಳೆಗಳನ್ನು ರಾತ್ರಿಯ ವೇಳೆಯಲ್ಲಿ ಕಾಡುಹಂದಿಗಳು ಹಾಳು ಮಾಡುತ್ತಿವೆ. ನೇರವಾಗಿ ಜೋಳ ಮುಂತಾದ ಹೊಲಗಳಿಗೆ ನುಗ್ಗಿ ತೆನೆಗಳನ್ನು ಕಚ್ಚುವುದು, ಕಡ್ಡಿಗಳನ್ನು ಮುರಿದುಹಾಕುವುದನ್ನು ಮಾಡುತ್ತಿವೆ.

ತೀವ್ರ ನೀರಿನ ಕೊರತೆಯ ನಡುವೆ ಕಷ್ಟಪಟ್ಟು ಬೆಳೆದಿರುವ ಬೆಳೆಗಳು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಗಿದೆ. ಕಾಡುಹಂದಿಗಳ ದಾಳಿಯಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ತೋಟಗಳ ಸುತ್ತಲೂ ತಂತಿಬೇಲಿ ನಿರ್ಮಾಣ ಮಾಡಿದ್ದರು ಪ್ರಯೋಜನವಾಗುತ್ತಿಲ್ಲ.

ADVERTISEMENT

ಮಾರುದ್ದ ಬೆಳೆದು ನಿಂತ ಗೋವಿನ ಜೋಳದ ಬೆಳೆಯಲ್ಲಿ ಕಾಡು ಹಂದಿಗಳು ದಾಂದಲೆ ಮಾಡಿ ಬೆಳೆಯನ್ನು ಮುರಿಯುತ್ತಿದ್ದು, ಅನಿವಾರ್ಯವಾಗಿ ರೈತರು ಆ ಮುರಿದು ಬಿದ್ದ ಬೆಳೆಯನ್ನು ಕಡಿದು ಜಾನುವಾರುಗಳಿಗೆ ಹಾಕು ತ್ತಿದ್ದಾರೆ. ರೈತರು ರಾತ್ರಿಯಿಡಿ ಕಾಡು ಹಂದಿಗಳ ಕಾವಲು ಕಾಯ್ದು ಬೆಳೆಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಭಾಗದಲ್ಲಿ ರೈತರು ಯಾವ ಬೆಳೆಗಳನ್ನು ಇಟ್ಟರೂ ಅದನ್ನು ಕೊನೆಯವರೆಗೂ ಜೋಪಾನ ಮಾಡುವುದೇ ದೊಡ್ಡ ಸವಾಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ಕೊಟ್ಟಿದ್ದೇವೆ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ರೈತರು ತಿಳಿಸಿದ್ದಾರೆ.

ಮುಖ್ಯರಸ್ತೆಯಿಂದ ತೋಟಗಳಿಗೆ 200 ಮೀಟರ್ ನಷ್ಟು ದಾರಿ ಮಾಡಿಕೊಟ್ಟರೆ, ನೂರಾರು ಮಂದಿ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರಾದ ಮನ್ನಾರಪ್ಪ, ತಿರಂಗಳ್ ಭಟ್ಟಾಚಾರ್ಯ, ವೆಂಕಟೇಶಪ್ಪ, ನಾರಾಯಣಪ್ಪ, ಶಂಕರ, ಅಕ್ಕಯ್ಯಮ್ಮ, ವೆಂಕಟಪ್ಪ, ಸರೋಜಮ್ಮ, ವಾಸುದೇವರಾವ್, ಮಂಜುನಾಥ್, ಶ್ರೀನಿವಾಸನಾಯುಡು, ಉತ್ತನಳ್ಳಪ್ಪ, ವೆಂಕಟೇಶಪ್ಪ, ನರಸಿಂಹಭಟ್ಟಾಚಾರ್, ರಾಧಮ್ಮ, ದೊಡ್ಡಮುನಿಶಾಮಪ್ಪ, ಚಿಕ್ಕಮುನಿಶಾಮಪ್ಪ ಮುಂತಾದವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.