ADVERTISEMENT

ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 11:13 IST
Last Updated 14 ಜುಲೈ 2017, 11:13 IST

ದೇವನಹಳ್ಳಿ: ಇದೇ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದಾಜು ₹1,100 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ’ ಎಂದು ಪ್ರಭಾರ ಜಿಲ್ಲಾಧಿಕಾರಿ ವಿನೂತ ಪ್ರಿಯಾ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

‘ಬೆಂಗಳೂರು ನಗರದ ಹೆಬ್ಬಾಳ–ನಾಗವಾರ ವ್ಯಾಪ್ತಿಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಸಣ್ಣ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನಡೆಯಲಿದೆ’.

ADVERTISEMENT

ಯಲಹಂಕ ವ್ಯಾಪ್ತಿಯ 12 ಕೆರೆ, ದೇವನಹಳ್ಳಿ 9, ಚಿಕ್ಕಬಳ್ಳಾಪುರ ತಾಲ್ಲೂಕು 24 ಕೆರೆ, ಶಿಡ್ಲಘಟ್ಟ ತಾಲ್ಲೂಕು 9, ಗೌರಿಬಿದನೂರು ತಾಲ್ಲೂಕು 8 ಕೆರೆ, ಗುಡಿಬಂಡೆ ತಾಲ್ಲೂಕು 3 ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿವೆ ಎಂದರು.

ದೇವನಹಳ್ಳಿಯಿಂದ ಕೋಲಾರದವರೆಗೆ 50 ಕಿ.ಮೀ. ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ₹ 144 ಕೋಟಿ ಅನುದಾನದಲ್ಲಿ ಶಂಕುಸ್ಥಾಪನೆ, ₹ 2 ಕೋಟಿ ವೆಚ್ಚದ ನೂತನ ಜಿಲ್ಲಾ ಪಶು ಪಾಲಿಕ್ಲಿನಿಕ್, ದೇವರಾಜ್ ಅರಸ್ ಭವನ ಕಟ್ಟಡ ಕಾಮಗಾರಿಗೆ ₹ 3.25 ಕೋಟಿಗೆ ಚಾಲನೆ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದಯಾನಂದ್ ಮಾತನಾಡಿ, ‘ಯಲಿಯೂರಿನಲ್ಲಿ ನಿರ್ಮಾಣವಾಗಿರುವ ಬಾಲಕರ ವಿದ್ಯಾರ್ಥಿನಿಲಯ ಮತ್ತು ತಾಲ್ಲೂಕಿನಲ್ಲಿ ಈಗಾಗಲೇ ಪೂರ್ಣಗೊಂಡಿರುವ ಏಳು ಸಮುದಾಯ ಭವನ ಇದೇ ಸಂದರ್ಭದಲ್ಲಿ ಉದ್ಘಾಟನೆಯಾಗಲಿದೆ ಎಂದರು.

ಕುಂದಾಣ ರೈತ ಸಂಪರ್ಕ ಕೇಂದ್ರ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ 8 ಪ್ರೌಢ ಶಾಲಾ ಕಟ್ಟಡ, 5 ಅಂಗನವಾಡಿ ಕೇಂದ್ರ, ಒಂದು ಪ್ರಾಥಮಿಕ ಪಶು ಆರೋಗ್ಯ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಯಾಗಲಿದೆ ಎಂದರು.

ಉಪವಿಭಾಗಾಧಿಕಾರಿ ಜಗದೀಶ್ ಮಾತನಾಡಿ, ‘ಜಿಲ್ಲೆಯಲ್ಲಿ ₹ 1.52 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅರಣ್ಯ ಇಲಾಖೆಯಲ್ಲಿ 5 ಲಕ್ಷ ಸಸಿ ಬೆಳೆಸಲಾಗಿದೆ. ಕಾರ್ಯಕ್ರಮದಲ್ಲಿ ಸಸಿ ವಿತರಿಸಬೇಕು, ಅರಣ್ಯ ಅಕ್ಕಪಕ್ಕ ಇರುವ ಅರ್ಹರಿಗೆ ಜಿಲ್ಲೆಯಲ್ಲಿ 700 ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟವ್ ವಿತರಿಸಬೇಕು. ಗೊಂದಲ ಆಗಬಾರದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಯೋಗಿಶ್, ತಹಶೀಲ್ದಾರ್‌ ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.