ADVERTISEMENT

ಸರಕು ಸಾಗಾಣಿಕೆ ವಾಹನಕ್ಕೆ ನಿಷೇಧ

13ರಿಂದ 18ರ ವರೆಗೆ ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ಏರ್ ಷೋ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:54 IST
Last Updated 8 ಫೆಬ್ರುವರಿ 2017, 8:54 IST

ದೇವನಹಳ್ಳಿ:  ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇದೇ 13ರಿಂದ ಏರ್ ಷೋ ಆರಂಭವಾಗಿ  18ಕ್ಕೆ ಮುಕ್ತಾಯವಾಗಲಿರುವುದರಿಂದ ಈ ಅವಧಿಯಲ್ಲಿ ಖಾಸಗಿ ಬಸ್ ಮತ್ತು ಸರಕು ಸಾಗಾಣಿಕೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರ ಎಸ್‌ಐ ಎಸ್. ಮಹೇಶ್ ಕುಮಾರ್ ತಿಳಿಸಿದರು.

ದೇವನಹಳ್ಳಿ ಲಯನ್ ಸೇವಾ ಸಭಾಂಗಣದಲ್ಲಿ ನಡೆದ ಖಾಸಗಿ ಬಸ್ ಮತ್ತು ಸರಕು ಸಾಗಾಣಿಕೆ ವಾಹನ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿಯಿಂದ ಬೆಂಗಳೂರಿನ ಮೆಕ್ರಿ ವೃತ್ತದ ವರೆಗೆ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಸಂಚಾರ ನಿಷೇಧ ಮಾಡಲಾಗಿದ್ದು ಪರ್ಯಾಯ ಮಾರ್ಗವಾಗಿ ಸೂಲಿಬೆಲೆ ರಸ್ತೆಯಿಂದ ಬೆಟ್ಟಕೋಟೆ ಮತ್ತು ಬೂದಿಗೆರೆ ಮಾರ್ಗದ ಮೂಲಕ ಕೆ. ಆರ್. ಪೇಟೆ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಅನೇಕಕವಲು ರಸ್ತೆ ಮೂಲಕ ಸಂಚರಿಸಲು ಅವಕಾಶವಿದೆ.

ರಾಜ್ಯ ರಸ್ತೆ ಸಾರಿಗೆ ಮತ್ತು ಬಿಎಂಟಿಸಿ ಬಸ್ ಗಳಿಗೆ ವಿನಾಯಿತಿ ನೀಡಲಾಗಿದ್ದು, ಅಂತರ ರಾಜ್ಯ ಪ್ರಯಾಣದ ಖಾಸಗಿ ಟ್ರಾವಲ್ಸ್ ಗಳಿಗೂ ನಿಷೇಧವಿದೆ, ಆರುದಿನ ಮಾತ್ರ ಈ ನಿಷೇಧವಿದ್ದು ಮಾಲೀಕರು ಸಹಕರಿಸಬೇಕು ಎಂದರು.

ಯಾವುದೆ ವಾಹನ ಅಥವಾ ಕಾರುಗಳು ಉದ್ದೇಶ ಪೂರ್ವಕವಾಗಿ ನಿಲುಗಡೆ ಮಾಡುವಂತಿಲ್ಲ , ಅತಿವೇಗ, ಕರ್ಕಶ ಶಬ್ದಕ್ಕೂ ಕಡಿವಾಣ ಹಾಕಲಾಗಿದೆ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿಯ ಕ್ರಮ ಅನಿವಾರ್ಯವಾಗಲಿದೆ ಎಂದರು. ನಗರ ಜಿಲ್ಲಾ ಸಂಚಾರ ಸಲಹಾ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.