ADVERTISEMENT

ಸರ್ಕಾರಿ ಶಾಲೆಗೆ ₹80 ಲಕ್ಷ ವೆಚ್ಚದ ಸಭಾಂಗಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 10:17 IST
Last Updated 2 ಸೆಪ್ಟೆಂಬರ್ 2017, 10:17 IST
ಹೆಬ್ಬಗೋಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಅಂದಾಜು ₹80ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಟಿಮ್‌ಕಿನ್‌ ರೌಂಡ್ ಟೇಬಲ್ ಸಭಾಂಗಣವನ್ನು ಟಿಮ್‌ಕಿನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಕೌಲ್ ಉದ್ಘಾಟಿಸಿದರು
ಹೆಬ್ಬಗೋಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಅಂದಾಜು ₹80ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಟಿಮ್‌ಕಿನ್‌ ರೌಂಡ್ ಟೇಬಲ್ ಸಭಾಂಗಣವನ್ನು ಟಿಮ್‌ಕಿನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಕೌಲ್ ಉದ್ಘಾಟಿಸಿದರು   

ಆನೇಕಲ್‌: ಸರ್ಕಾರಿ ಶಾಲೆಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಹಾಗೂ ಕಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಂಪೆನಿಗಳ ಸಾಮಾಜಿಕ ಜವಬ್ದಾರಿಯಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸಭಾಂಗಣವನ್ನು ಹೆಬ್ಬಗೋಡಿ ಸರ್ಕಾರಿ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಟಿಮ್‌ಕಿನ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಕೌಲ್ ತಿಳಿಸಿದರು.

ಅವರು ತಾಲ್ಲೂಕಿನ ಹೆಬ್ಬಗೋಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಅಂದಾಜು ₹80ಲಕ್ಷ ವೆಚ್ಚದಲ್ಲಿ ಟಿಮ್‌ಕಿನ್‌ ಬೆಂಗಳೂರು ರೌಂಡ್ ಟೇಬಲ್, ಬೆಂಗಳೂರು ಲೇಡಿಸ್ ಸರ್ಕಲ್ ವತಿಯಿಂದ ನಿರ್ಮಿಸಿರುವ ಟಿಮ್‌ಕಿನ್‌ ರೌಂಡ್ ಟೇಬಲ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಸಭಾಂಗಣವು ಗ್ರೀನ್‌ರೂಮ್, ಶೌಚಾಲಯ, ಸೌಂಡ್‌ ರೂಮ್, ಸ್ಟೇಜ್‌, ಅಲಂಕಾರಿಕ ಲೈಟ್‌ಗಳ ಸೌಲಭ್ಯ ಹೊಂದಿದೆ. ಸುಮಾರು ₹1.65ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಪ್ರೊಜೆಕ್ಟರ್ ಹಾಗೂ ವಿಶಾಲವಾದ ಸ್ಕ್ರೀನ್ ಅಳವಡಿಸಲಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶೈಕ್ಷಣಿಕ ಉದ್ದೇಶಗಳಿಗೆ ಬಳಸುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ADVERTISEMENT

ಹೆಬ್ಬಗೋಡಿ ನಗರಸಭಾ ಅಧ್ಯಕ್ಷೆ ಗಿರಿಜಾ ಮಂಜುನಾಥ್ ಮಾತನಾಡಿ ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳಿಗೆ ಖಾಸಗಿ ಸಂಸ್ಥೆಗಳು ಉತ್ತಮ ನೆರವು ನೀಡಿ ಸೌಲಭ್ಯಗಳನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಪಿ.ರಾಮಚಂದ್ರ ಮಾತನಾಡಿ ದಾನಿಗಳ ನೆರವಿನಿಂದ ಅತ್ಯಂತ ವಿಶಿಷ್ಟ ವಿನ್ಯಾಸವುಳ್ಳ ಸಭಾಂಗಣವನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಗಿದೆ. ಸುಮಾರು 500 ಮಕ್ಕಳು ಕುಳಿತುಕೊಳ್ಳಲು ಅವಕಾಶವಿರುವ ಬೃಹತ್ ಸಭಾಂಗಣ ಇದಾಗಿದ್ದು ತಾಲ್ಲೂಕಿನ ಸರ್ಕಾರಿ ಶಾಲೆಗಳ ಪೈಕಿ ಅತ್ಯಂತ ವಿಶೇಷ ಸೌಲಭ್ಯವುಳ್ಳ ಸಭಾಂಗಣ ಇದಾಗಿದೆ ಎಂದರು.

ರೌಂಡ್‌ ಟೇಬಲ್ ಅಧ್ಯಕ್ಷ ಕ್ರಿಸ್ಟೋಫರ್ ಅರ್ವಿಂತ್, ಬೆಂಗಳೂರು ಲೇಡಿಸ್‌ ಸರ್ಕಲ್‌ನ ಅಧ್ಯಕ್ಷೆ ಮಾಧುರಿ ಗಟ್ಟಾನಿ, ಸಂಸ್ಥೆಯ ಪ್ರಶಾಂತ್, ಜ್ಯೋತಿ ಬನ್ಸಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ಹೆಬ್ಬಗೋಡಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಲ್ಲಪ್ಪ, ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಅಖ್ತರ್‌ ಉನ್ನಿಸಾ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸಿ.ನಾರಾಯಣಸ್ವಾಮಿ, ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶ್‌ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.