ADVERTISEMENT

ಸಹಕಾರಿ ಕ್ಷೇತ್ರ ಪಾರದರ್ಶಕವಾಗಿರಲಿ

ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ಉದ್ಘಾಟನೆಯಲ್ಲಿ ಜಾಲಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 10:01 IST
Last Updated 5 ಅಕ್ಟೋಬರ್ 2015, 10:01 IST

ದೊಡ್ಡಬಳ್ಳಾಪುರ: ‘ಸಹಕಾರಿ ಕ್ಷೇತ್ರದಲ್ಲಿ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ಮುಖ್ಯ. ಆದರೆ ಇಂದು ಸಹಕಾರಿ ಕ್ಷೇತ್ರ ರಾಜಕೀಯಗೊಳ್ಳುತ್ತಿದೆ’ ಎಂದು ಕೇಂದ್ರದ ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಹೇಳಿದರು.

ನಗರದ ಬಸವ ಭವನದಲ್ಲಿ ಭಾನುವಾರ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಮತ್ತು ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರಿ ರಂಗದ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಇದನ್ನು ಬೆಳೆಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಎಲ್ಲರ ಅಭಿವೃದ್ಧಿ ಸಾಧ್ಯ. ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಸಹಕಾರಿ ರಂಗದ ಮೂಲಕ’ ಎಂದರು.

ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ರಾಜಣ್ಣ ಮಾತನಾಡಿ, ‘ಗ್ರಾಮಿಣ ಪ್ರದೇಶದಲ್ಲಿ ಸಹಕಾರಿ ರಂಗದಲ್ಲಿ ಬ್ಯಾಂಕ್‌ ಸ್ಥಾಪಿಸಿ ನಡೆಸುವುದು ಸಾಹಸದ ಕೆಲಸ. ಆದರೆ ಪ್ರಾಮಾಣಿಕ ಸೇವೆ ಮಾಡಿದರೆ ಎಲ್ಲರ ಏಳಿಗೆ ಸಾಧ್ಯವಾಗಲಿದೆ. ಸಹಕಾರಿ ಬ್ಯಾಂಕ್‌ ಒಬ್ಬರ ಸ್ವತ್ತಾಗಬಾರದು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮುಖ್ಯ. ಹಿಂದುಳಿದ ವರ್ಗಕ್ಕೆ ಭೂಮಿಯ ಹಕ್ಕು ದೊರೆಯುವುದೇ ಅಪರೂಪ. ಆದರೆ ಭೂಮಿಯ ಹಕ್ಕು ದೊರೆತಿರುವವರು ಎಂತಹದ್ದೇ ಕಷ್ಟದ ದಿನಗಳಲ್ಲೂ ಭೂಮಿ ಮಾರಾಟ ಮಾಡಿಕೊಳ್ಳದೆ ಸಹಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಏಳಿಗೆಯನ್ನು ಹೊಂದಬೇಕು’ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ನಗರದ ಹೊರ ಭಾಗದಲ್ಲಿ ವಾಲ್ಮೀಕಿ ಸಂಘಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡುವಂತೆ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಾಗುವುದು’ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಾಯಕ ಸಂಘ ಮತ್ತು ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್‌.ಪ್ರೇಮ್‌ಕುಮಾರ್‌ ವಹಿಸಿದ್ದರು. ಸಮಾರಂಭದ ಸಾನಿಧ್ಯವನ್ನು ವಾಲ್ಮೀಕಿ ಮಹಾಸಂಸ್ಥಾನದ ಪ್ರಸನ್ನಾನಂದಪುರಿ ಮಹಾ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಯಾಪ್ಪ ಅಧ್ಯಕ್ಷ ಆರ್‌.ಜಿ.ವೆಂಕಟಾಚಲಯ್ಯ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಶಾಸಕ ತಿಪ್ಪರಾಜ ಹವಾಲ್ದಾರ್‌, ಜಿ.ಪಂ ಸದಸ್ಯ ಎನ್‌.ಹನುಮಂತೇಗೌಡ, ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ, ನಾಯಕ ಸಂಘದ ಮುಖಂಡ ಕುಮಾರ್‌ ಭಾಗವಹಿಸಿದ್ದರು.

***
‘ವಾಲ್ಮೀಕಿ ಸಂಘಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡುವಂತೆ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ’.
-ಟಿ.ವೆಂಕಟರಮಣಯ್ಯ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT