ADVERTISEMENT

ಸಿದ್ದಗಂಗಾ ಶ್ರೀಗಳ ರಥಕ್ಕೆ ಅದ್ದೂರಿ ಸ್ವಾಗತ: ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:39 IST
Last Updated 22 ಮಾರ್ಚ್ 2017, 9:39 IST

ವಿಜಯಪುರ: ಇದೇ 22ರಂದು ವಿಜಯಪುರ ಪಟ್ಟಣಕ್ಕೆ ಬರುವ ಸಿದ್ಧಗಂಗಾ ಮಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ ಅವರ ಸಾಧನಾರಥದ ಯಾತ್ರೆಯ ಕುರಿತು ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣದ ಬಸವಕಲ್ಯಾಣ ಮಠದ ಅಧ್ಯಕ್ಷ  ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ರಥವನ್ನು ಮಧ್ಯಾಹ್ನ 12 ಗಂಟೆಗೆ ದೇವನಹಳ್ಳಿ ರಸ್ತೆಯಲ್ಲಿರುವ ಬಸವೇಶ್ವರ ಬಸ್‌ ನಿಲ್ದಾಣ ಬಳಿಯ ಮಾರುತಿ ಆಂಜನೇಯಸ್ವಾಮಿ ದೇವಾಲಯದ ಬಳಿ  110 ಮುತ್ತೈದೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ  ಜಾನಪದ ಕಲಾತಂಡಗಳು, ಮಂಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲು  ತೀರ್ಮಾನಿಸಲಾಯಿತು.

ಈಗಾಗಲೇ ನಿಗದಿಪಡಿಸಿರುವ ಪಾರ್ಕ್ ರಸ್ತೆ, ಸಂಗಮೇಶ್ವರ ಚಿತ್ರಮಂದಿರ ರಸ್ತೆಮಾರ್ಗದ ಮೂಲಕ ಗಾಂಧಿ ಚೌಕದಲ್ಲಿ ಸಭೆ ಸೇರಿ ಅಲ್ಲಿ  ದರ್ಶನ ಮಾಡಲು ಮತ್ತು ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು.

ಗಾಂಧಿ ಚೌಕದಲ್ಲಿ ನಡೆಯುವ ಧಾರ್ಮಿಕ ಸಮಾವೇಶದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅವರು ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಕುರಿತ ಉಪನ್ಯಾಸ ನೀಡುವರು.  

ಮಹದೇವ ಸ್ವಾಮೀಜಿ ಆಶೀರ್ವಚನ ನೀಡುವರು. ನಂತರ ಮೇಲೂರು ಮುಖ್ಯರಸ್ತೆ ಮೂಲಕ ಸಾಗಿ ಬಸ್‌ನಿಲ್ದಾಣ, ಕೆ.ಎಸ್ ರಸ್ತೆ, ಚನ್ನರಾಯಪಟ್ಟಣ ಸರ್ಕಲ್ ನಿಂದ ಸೂಲಿಬೆಲೆಯ ಕಡೆಗೆ ಹೊರಡಲಿದೆ.

ರಥ ಸಾಗುವ ರಸ್ತೆಗಳಲ್ಲಿ  ರಂಗೋಲಿ ಹಾಕಿ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಯಿತು. ಮಾರುತಿ ಸರ್ಕಲ್, ಗಾಂಧಿಚೌಕ, ಕೆ.ಎಸ್ ರಸ್ತೆ ಕಡೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಕರು ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.