ADVERTISEMENT

‘ಸೌರ ವಿದ್ಯುತ್ ಅಳವಡಿಕೆಗೆ ಸಹಾಯಧನ ನೀಡಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 10:01 IST
Last Updated 18 ಸೆಪ್ಟೆಂಬರ್ 2017, 10:01 IST
ವಿಜಯಪುರದ ಮೆಹಬೂಬ್ ನಗರದಲ್ಲಿ ರೀಲರ್ ಖಲಿಂಪಾಷ ಅವರ ಮನೆಯಲ್ಲಿ ಸೌರ ವಿದ್ಯುತ್ ನಿಂದ ರೇಷ್ಮೆನೂಲು ಸುತ್ತುತ್ತಿರುವುದು
ವಿಜಯಪುರದ ಮೆಹಬೂಬ್ ನಗರದಲ್ಲಿ ರೀಲರ್ ಖಲಿಂಪಾಷ ಅವರ ಮನೆಯಲ್ಲಿ ಸೌರ ವಿದ್ಯುತ್ ನಿಂದ ರೇಷ್ಮೆನೂಲು ಸುತ್ತುತ್ತಿರುವುದು   

ವಿಜಯಪುರ: ರೇಷ್ಮೆನೂಲು ಬಿಚ್ಚಾಣಿಕೆ ಘಟಕಗಳಿಗೆ ಅನುಕೂಲ ಕಲ್ಪಿಸಲು ಇಲಾಖೆಯಿಂದ ಜನರೇಟರ್ ಖರೀದಿ ಮಾಡಿಕೊಳ್ಳಲು ನೀಡುತ್ತಿರುವ ಸಹಾಯಧನದ ಬದಲಿಗೆ ಸೌರ ವಿದ್ಯುತ್ ಅಳವಡಿಸಿಕೊಳ್ಳಲು ಸಹಾಯಧನ ನೀಡಬೇಕು ಎಂದು ರೀಲರುಗಳು ಒತ್ತಾಯ ಮಾಡಿದ್ದಾರೆ.

ರೇಷ್ಮೆ ನೂಲಿಗೆ ಸೂಕ್ತವಾದ ಬೆಲೆ ಸಿಗದೆ, ರೀಲರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದಿಸಿದ ನೂಲಿಗೆ ಸೂಕ್ತವಾದ ಬೆಲೆ ಇಲ್ಲದೆ, ಉದ್ಯಮ ಸಂಕಷ್ಟದತ್ತ ಸಾಗುತ್ತಿದೆ.
‘ಇಂತಹ ಸಂದರ್ಭದಲ್ಲಿ ನೂಲು ಬಿಚ್ಚಾಣಿಕೆ ಘಟಕಗಳಿಗೆ ಅಗತ್ಯವಾಗಿರುವ ವಿದ್ಯುತ್ ಪೂರೈಕೆ ಮಾಡಿಕೊಂಡು ವಿದ್ಯುತ್ ಇಲ್ಲದ ಸಮಯದಲ್ಲಿ ಜನರೇಟರ್ ಉಪಯೋಗಿಸಬೇಕಾಗಿದೆ. ಇದರಿಂದ ಬರುವ ಅಲ್ಪ ಪ್ರಮಾಣದ ಲಾಭಾಂಶವನ್ನು ಸೀಮೆ ಎಣ್ಣೆ ಖರೀದಿ, ವಿದ್ಯುತ್ ಬಿಲ್ ಪಾವತಿ ಮಾಡಲು ಬಳಕೆ ಮಾಡಬೇಕಾಗುತ್ತದೆ’ ಎಂದು ರೀಲರ್ ಖಲಿಂಪಾಷ ತಿಳಿಸಿದ್ದಾರೆ.

ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಸೌರ ವಿದ್ಯುತ್ ಅಳವಡಿಕೆ ಮಾಡಿಕೊಳ್ಳುವುದರಿಂದ ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ವಿದ್ಯುತ್ ಇಲ್ಲದಿದ್ದರೂ ರೀಲಿಂಗ್ ಘಟಕ ನಡೆಯುತ್ತದೆ.

ADVERTISEMENT

ಇಲಾಖೆಯಿಂದ ಜನರೇಟರ್ ಖರೀದಿಗೆ ₹ 1.30 ಲಕ್ಷ ಸಹಾಯಧನ ನೀಡುತ್ತಾರೆ. ಒಂದು ಎಚ್.ಪಿ. ಸೌರ ವಿದ್ಯುತ್ ಘಟಕಕ್ಕೆ ₹ 80 ಸಾವಿರದವರೆಗೂ ಖರ್ಚು ಬರುತ್ತದೆ. ಒಂದು ಘಟಕದಲ್ಲಿ 4 ಬ್ಯಾಟರಿಗಳು, 1 ಎಚ್.ಪಿ. ಮೋಟಾರ್, ಸೋಲಾರ್ ಪ್ಲೇಟ್ ಸಿಗುತ್ತದೆ. ಒಮ್ಮೆ ಚಾರ್ಚ್ ಆದರೆ 6 ಗಂಟೆ ಕೆಲಸ ಮಾಡಬಹುದಾಗಿದೆ.

ಇದನ್ನು ಅಳವಡಿಸಿಕೊಂಡರೆ, ರೀಲಿಂಗ್ ಮಾಡುವುದಕ್ಕೆ, ನೂಲು ಸುತ್ತುವುದಕ್ಕೂ ಬಳಕೆ ಮಾಡಬಹುದಾಗಿದೆ. ಮನೆಗಳ ಉಪಯೋಗಕ್ಕೂ ಬಳಸಲು ಸಾಧ್ಯವಿದೆ. ಶಬ್ದ ಮಾಲಿನ್ಯ ತಡೆಗಟ್ಟಬಹುದು, ಕಾರ್ಮಿಕರ ಆರೋಗ್ಯ ರಕ್ಷಣೆಗೂ ಇದು ಸೂಕ್ತವಾಗಿದೆ.

ವಿಜಯಪುರದಲ್ಲಿ ಮೆಹಬೂಬ್ ನಗರ, ಟಿಪ್ಪುನಗರ ಸೇರಿದಂತೆ ನಾಲ್ಕು ಕಡೆಗಳಲ್ಲಿ ಸೌರ ವಿದ್ಯುತ್ ಘಟಕ ಮಾಡಿಕೊಳ್ಳಲಾಗಿದೆ. ಇಲಾಖೆಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇಲಾಖೆಯಿಂದ ಈವರೆಗೂ ಉತ್ತರ ಬಂದಿಲ್ಲವೆಂದು ರೀಲರುಗಳಾದ ಖುತುಬುದ್ದೀನ್, ಸಾಧಿಕ್ ಪಾಷ, ಮುನಿನಾರಾಯಣಪ್ಪ, ವೇಣು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.