ADVERTISEMENT

‘ಜೈನರ ಪವಿತ್ರ ನೆಲೆ ಮಾಗಡಿ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:05 IST
Last Updated 4 ಸೆಪ್ಟೆಂಬರ್ 2015, 10:05 IST

ಮಾಗಡಿ: ಮಾಗಡಿ ಸೀಮೆ ಜೈನರ ಪವಿತ್ರ ನೆಲೆಯಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾತತ್ವ ಮತ್ತು ಸಾಹಿತ್ಯಾಧಾರಗಳಿವೆ. ಸಂಕೀಘಟ್ಟದ ಪುರಾತನ ವರ್ಧಮಾನ ಬಸದಿಯಲ್ಲಿರುವ ವರ್ಧಮಾನ ವಿಗ್ರಹದ ಹಿಂಭಾಗದಲ್ಲಿ  ಇರುವ ಹೊಯ್ಸಳ ವಂಶ ವೃಕ್ಷ ತಿಳಿಸುವ ಶಾಸನವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಿ.ಆರ್‌.ಚಂದ್ರಮಾಗಡಿ ನುಡಿದರು.

ಪಟ್ಟಣದ ಕೆಂಪೇಗೌಡ ಪ್ರೌಢಶಾಲಾ ಆವರಣದಲ್ಲಿ ರೂರಲ್‌ ಕಾಲೇಜು ಕನಕಪುರ, ಇತಿಹಾಸ ಮತ್ತು ಪ್ರವಾಸೋದ್ಯಮ ವಿಭಾಗ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹೃದಯ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಅವರು ಸಮಾರೋಪಭಾಷಣ ಮಾಡಿದರು.

ಮಾಗಡಿ ಸೀಮೆ ಬೌದ್ಧ, ಜೈನ, ಶೈವ, ವೈಷ್ಣವ ಧರ್ಮಗಳ ಚಟುವಟಿಕೆಗಳ ನೆಲೆ. ಕದಂಬರಿಂದ ಮೈಸೂರಿನ ಯದವಂಶೀಯರವರೆಗೆ ಆಡಳಿತ ಮಜಲುಗಳನ್ನು ಚರಿತ್ರೆಯಲ್ಲಿ ಕಾಣಬಹುದು. ಹೊಯ್ಸಳರ ಅವನತಿ ಮತ್ತು ವಿಜಯನಗರದ ಏಳ್ಗೆಯ ನಡುಗಾಲದಲ್ಲಿ ಮಾಗಡಿ ಸೀಮೆಯನ್ನು ಕಾಕತೀಯ ಪ್ರತಾಪ ರುದ್ರದೇವ ಆಳಿದ್ದನೆಂದು ಹೇಳಲಾಗಿದೆ. ಕೆರೆ ಕಟ್ಟೆ ಕಲ್ಯಾಣಿಗಳನ್ನು ಕಟ್ಟಿಸಿದ ಮುಮ್ಮಡಿ ಕೆಂಪೇಗೌಡ ಮಳೆಯ ಹನಿಗಳನ್ನು ಸಂಗ್ರಹಿಸಿಡಲು ಕಲೆಯ ಚತುರತೆಯೇ ಕೆರೆ. ಕೆರೆಗಳು ಮಾಗಡಿ ಸೀಮೆ ಪಾಲಿಗೆ ಪವಿತ್ರಗಂಗೆಯಾಗಿದೆ ಎಂದರು.

ತಾಲ್ಲೂಕಿನಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಉಳಿಸಿಕೊಳ್ಳಲು ಒತ್ತುವರಿ ತೆರವುಗೊಳಿಸಬೇಕಿದೆ ಎಂದು ಅವರು ಹೇಳಿದರು.
ಮಾಗಡಿ ತಾಲ್ಲೂಕಿನ ಆದಿವಾಸಿ ಬುಡಕಟ್ಟು, ಅರೆ ಅಲೆಮಾರಿ ಜನಾಂಗಳಲ್ಲಿ ಇರುವ ಜನಪದ ಮೂಲದ ಚರಿತ್ರೆಯ ರಕ್ಷಣೆ ಮಾಡಬೇಕು. ಜ್ಞಾನಯೋಗಿ, ಕಾಯಕಯೋಗಿ ಅನುಭಾವದ ಉತ್ತುಂಗ ಶಿಖರ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮಿಜಿ ಜನಿಸಿದ ಸ್ಥಳ ವೀರಾಪುರದ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿಸಿ ಅಭಿವೃದ್ದಿ ಪಡಿಸಬೇಕು ಎಂದು ಡಿ.ಆರ್‌.ಚಂದ್ರ ಮಾಗಡಿ ತಿಳಿಸಿದರು.

ನಿವೃತ್ತ ಕನ್ನಡ ಪಂಡಿತ ಎಂ,ರೇವಣ್ಣ ಮಾತನಾಡಿ, ಚರಿತ್ರೆಯ ಘಟನೆಗಳನ್ನು ವರ್ತಮಾನದ ಬದುಕಿಗೆ ಪೂರಕವಾಗುವಂತೆ ತಿಳಿಸುವುದು ಸೂಕ್ತ ಎಂದರು.

ಹುಲಿಕಟ್ಟೆ ಎಚ್‌.ಜಿ.ಚನ್ನಪ್ಪ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಹಾಗೂ ಲೇಖಕ ಮುಳ್ಳುಕಟ್ಟಮ್ಮನ ಪಾಳ್ಯದ ಗೋವಿಂದರಾಜು ಮಾತನಾಡಿ ಮಾಗಡಿ ಸೀಮೆ ಸಾಮಾಜಿಕ ಬದುಕಿನ ಸಾಮರಸ್ಯದ ಚಿತ್ರಣವನ್ನು ಮಕ್ಕಳಿಗೆ ತಿಳಿಸಿ ಕೊಡಲು ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಸಹಾಯಕವಾಗಿದೆ ಎಂದು ಗೋವಿಂದ ರಾಜು ತಿಳಿಸಿದರು.

ಮುಖ್ಯೋಪಾಧ್ಯಾಯ ಧನಂಜಯ, ಬಿ.ಎನ್‌.ರಾಜು, ಎಚ್‌.ದೇವರಾಜು, ವಿಜಯಸಿಂಹ, ಶಿವಕುಮಾರ್‌, ಎ,ಎನ್‌,ರಾಮಕೃಷ್ಣಯ್ಯ ಐತಿಹಾಸಿಕ ಪರಂಪರೆ ಕುರಿತು ಮಾತನಾಡಿದರು.

ದೋಣಕುಪ್ಪೆ ಸಿಎನ್‌ಎಸ್‌ ಪ್ರೌಢಶಾಲೆಯಲ್ಲಿ ತುಮಕೂರು ವಿ.ವಿ.ಯ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ್‌, ಪಟ್ಟಣದ ವಾಸವಿ ವಿದ್ಯಾಪೀಠ ಮತ್ತು ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿಮದ್ದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ, ಶ್ರೀರಂಗನಾಥ ಸ್ವಾಮಿ ಪ್ರೌಢಶಾಲೆಯಲ್ಲಿ ಶಿಕ್ಷಕ ಮಾರಣ್ಣ, ಶ್ರೀಗಂಗಾಧರೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಹೆಬ್ಬಳಲು ವಿಜಯಸಿಂಹ, ಕಲ್ಯಾದ ಉರಿಗದ್ದಿಗೇಶ್ವರ ಪ್ರೌಢಶಾಲೆಯಲ್ಲಿ ಡಾ.ಮುನಿರಾಜಪ್ಪ  ಐತಿಹಾಸಿಕ ಪರಂಪರೆ ಉಳಿಸಿ ಉಪನ್ಯಾಸ ನೀಡಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.