ADVERTISEMENT

ಪುಟ್ಟಣ್ಣಯ್ಯಗೆ ಪುಷ್ಪ ನಮನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:45 IST
Last Updated 20 ಫೆಬ್ರುವರಿ 2018, 8:45 IST

ದೇವನಹಳ್ಳಿ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯರವರ ಅಕಾಲಿಕ ನಿಧನದಿಂದ ರೈತ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ ಎಂದು ಹಸಿರು ಸೇನೆ ರಾಜ್ಯ ಸಂಚಾಲಕ ಕೆ.ಎಸ್.ಹರೀಶ್ ತಿಳಿಸಿದರು. ಇಲ್ಲಿನ ರೈತನಾಯಕ ಪ್ರೊ.ನಂಜುಂಡುಸ್ವಾಮಿ ವೃತ್ತದ ಬಳಿ ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ರೈತರ ಸಂಕಷ್ಟ, ಸಮಸ್ಯೆ ಅತಿಯಾಗಿ ಉಲ್ಬಣಗೊಂಡಾಗ ಮುಂಚೂಣಿಗೆ ಬಂದು ರೈತರನ್ನು ಒಗ್ಗೂಡಿಸಿದ ಪ್ರೊ.ನಂಜುಂಡಸ್ವಾಮಿ ಅನೇಕ ಹೋರಾಟ ನಡೆಸಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವಲ್ಲಿ ಸಫಲರಾಗಿದ್ದರು. ಅವರ ಜತೆಗೂಡಿದ ನೀಡಿದ ಕೆ.ಎಸ್.ಪುಟ್ಟಣ್ಣಯ್ಯ ರೈತ ಸಂಘಟನೆ ಬಲಪಡಿಸಲು ಅವಿರತ ಶ್ರಮಿಸಿದರು ಎಂದರು.

ರೈತ ಸಮುದಾಯದಿಂದ ಬಂದಿದ್ದ ಅವರು ಉತ್ತಮ ಶಿಕ್ಷಣ ಪಡೆದು ಅಪಾರ ಜ್ಞಾನ ಸಂಪತ್ತು ಉಳ್ಳವರಾಗಿದ್ದರು. ಶಾಸಕರಾಗಿಯೂ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿ ಮಡಿದಿರುವುದು ಸಂಘಟನೆಗೆ ಆಘಾತ ತಂದಿದೆ ಎಂದರು.

ADVERTISEMENT

ಸರಳ ಸ್ನೇಹಜೀವಿಯಾಗಿ ರೈತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಪ್ರೊ.ನಂಜುಂಡಸ್ವಾಮಿ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ಸಂಘಟನೆಗಾಗಿ ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆಯಬೇಕು. ಯುವ ರೈತ ಸಮುದಾಯ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.

ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಮುನಿಶಾಮಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಜಿಲ್ಲಾ ಮುಖಂಡ ಶಶಿಧರ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್, ಮುಖಂಡ ವಿಜಯಪುರ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.