ADVERTISEMENT

ಅಂಬೇಡ್ಕರ್‌ ಕಂಚಿನ ಪ್ರತಿಮೆ ಅನಾವರಣ

ಬೆಳಗಾವಿಯ ನಗರಪಾಲಿಕೆ ಆವರಣದಲ್ಲಿ ಸ್ಥಾಪನೆ; ಜಿಲ್ಲಾ ಉಸ್ತುವಾರಿ ಸಚಿವ, ಜನಪ್ರತಿನಿಧಿಗಳ ಸಮ್ಮುಖದಲ್ಲಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:56 IST
Last Updated 13 ಜುಲೈ 2017, 11:56 IST

ಬೆಳಗಾವಿ: ಇಲ್ಲಿನ ನಗರಪಾಲಿಕೆ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 15 ಎಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸಂಭ್ರಮದಿಂದ ಬುಧವಾರ ಅನಾವರಣಗೊಳಿಸಲಾಯಿತು.

ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತಿಮೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದರು. ಈ ಸುಸಂದರ್ಭದ ನೆನಪಿಗಾಗಿ ಉದ್ಯಾನದಲ್ಲಿ ಸಸಿ ನೆಟ್ಟು ನೀರೆರೆದರು.

₹ 40 ಲಕ್ಷದಲ್ಲಿ ಪ್ರತಿಮೆ ಸಿದ್ಧಪಡಿಸಲಾಗಿದೆ. ಪ್ರತಿಮೆ ಸ್ಥಾಪಿಸಲು 15 ಅಡಿ ಎತ್ತರದ ವೇದಿಕೆ ನಿರ್ಮಿಸಲಾಗಿದೆ. ಕಾರಂಜಿ ಅಳವಡಿಸಲಾಗಿದೆ. ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಒಟ್ಟಾರೆ ₹ 1.40 ಕೋಟಿ ವೆಚ್ಚದಲ್ಲಿ ಈ ಕಾರ್ಯ ನಡೆದಿದೆ.

ADVERTISEMENT

ನಂತರ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಇಡೀ ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ. ಸಂವಿಧಾನವನ್ನು ರಚಿಸುವ ಮೂಲಕ ಎಲ್ಲರಿಗೂ ಹಕ್ಕುಗಳನ್ನು ಕೊಟ್ಟವರು ಹಾಗೂ ಶೋಷಿತರು ತಲೆಎತ್ತಿ ಓಡಾಡುವಂತೆ ಮಾಡಿದ ಕೀರ್ತಿ ಅವರದು’ ಎಂದರು.

ಎಲ್ಲರೂ ಒಂದಾಗಬೇಕು:  ‘ದಲಿತರು ಎಡ, ಬಲ ಹಾಗೂ ಪರಿಶಿಷ್ಟ ಪಂಗಡ ಎನ್ನುವುದನ್ನು ಮರೆತು ಒಗ್ಗಟ್ಟಾಗಬೇಕು. ಆಗ, ದಲಿತ ಮುಖ್ಯಮಂತ್ರಿ ಹಾಗೂ ದಲಿತ ಪ್ರಧಾನಿ ಮಾಡುವುದು ಸಾಧ್ಯವಾಗುತ್ತದೆ. ದಲಿತರನ್ನು ಒಡೆದು ಆಳುವವರ ವಿರುದ್ಧ ಎಚ್ಚರದಿಂದ ಇರಬೇಕು’ ಎಂದು ಕಿವಿಮಾತು ಹೇಳಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ‘ದಲಿತರು ಜ್ಞಾನ ಸಂಪಾದನೆಗೆ ಆದ್ಯತೆ ಕೊಡಬೇಕು. ದಲಿತ ಸಂಘಟನೆಗಳ ಹೆಸರಿನಲ್ಲಿ ಕೆಲವರು ಬ್ಲಾಕ್‌ಮೇಲ್‌ ಮಾಡುವುದು ಕಂಡುಬರುತ್ತಿದೆ. ಇದು ಸರಿಯಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್‌ ಸೇಠ್‌, ‘ಸಂವಿಧಾನವನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ದಲಿತರಿಗೆ ಮೀಸಲಾದ ಶೇ 24.75 ಹಣವನ್ನು ಸಮರ್ಪಕವಾಗಿ ಬಳಸಬೇಕು ಹಾಗೂ ರಚನಾತ್ಮಕ ಕೆಲಸಗಳಿಗೆ ವಿನಿಯೋಗಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಮುಖಂಡರಿಗೆ ಸನ್ಮಾನ:  ‘ಪ್ರತಿಮೆ ಪಕ್ಕದ ಖಾಲಿ ಜಾಗದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಸಂಸತ್‌ ಭವನದ ಮಾದರಿಯಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಹೇಳಿದರು. ಮೂರ್ತಿಕಾರ ಸಂಜಯ ಕಿಲೇಕರ ಮತ್ತು ದಲಿತ ಸಂಘಟನೆಗಳ ಮುಖಂಡರನ್ನು ಸನ್ಮಾನಿಸಲಾಯಿತು.

ಪ್ರತಿಮೆ ಅನಾವರಣ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಸಂಜಯ ಪಾಟೀಲ, ಸಂಭಾಜಿ ಪಾಟೀಲ, ಮಹಾಂತೇಶ ಕವಟಗಿಮಠ, ವಿವೇಕರಾವ್‌ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮೇಯರ್‌ ಸಂಜೋತಾ ಬಾಂದೇಕರ, ಉಪಮೇಯರ್‌ ನಾಗೇಶ್‌ ಮಂಡೋಳ್ಕರ, ನಗರಪಾಲಿಕೆ ಸದಸ್ಯರಾದ ಜಯಶ್ರೀ ಮಾಳಗಿ, ರಮೇಶ ಸೊಂಟಕ್ಕಿ, ಮೀನಾ ವಾಝ್‌, ಸರಳಾ ಹೆರೇಕರ, ದಲಿತ ಮುಖಂಡ ಮಲ್ಲೇಶ್ ಚೌಗುಲೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.