ADVERTISEMENT

‘ಅಧಿಕಾರಿಗಳಿಂದ ಜನಪರ ಕೆಲಸದ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 6:11 IST
Last Updated 27 ಜುಲೈ 2017, 6:11 IST

ಬೈಲಹೊಂಗಲ: ‘ಪ್ರತಿ ಇಲಾಖೆ ಅಧಿಕಾರಿಗಳು ಸಮಾಜಮುಖಿ, ಜನಪರ ಕೆಲಸ ಮಾಡಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಬಡ ಜನರಿಗೆ ತಲುಪಿಸಬೇಕು’ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ಬುಧವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಯೋಗಕ್ಷೇಮ. ಹಿತರಕ್ಷಣಾ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಎಲ್ಲ ಅಧಿಕಾರಿಗಳು ಶ್ರದ್ಧೆ, ಭಕ್ತಿಯಿಂದ ಜನರ ಸೇವೆ ಮಾಡಬೇಕು. ಆ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರ ಪ್ರೀತಿ, ವಿಶ್ವಾಸದೊಂದಿಗೆ ಅಧಿಕಾರ ನಡೆಸಬೇಕು’ ಎಂದು ಹೇಳಿದರು.

ADVERTISEMENT

ಗದ್ದಲದ ಗೂಡಾದ ಸಭೆ: ಸಭೆ ನಡೆಯುತ್ತಿದ್ದಂತೆ ಆರೋಗ್ಯ ಇಲಾಖೆ ವಿಷಯ ಕುರಿತು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಸಿದ್ಧನ್ನವರ ಮಾತನಾಡುತ್ತಿದ್ದಂತೆ ದಲಿತ ಮುಖಂಡರು ಮಧ್ಯೆ ಪ್ರವೇಶಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲ ವೈದ್ಯಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳನ್ನು ತಮ್ಮ ಖಾಸಗಿ ಆಸ್ಪತ್ರೆಗೆ ಸಾಗಿಸಿ ಹಣ ಮಾಡುವ ದಂದೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಡಾ.ಎಸ್.ಎಸ್.ಸಿದ್ಧನ್ನವರ ಮಾತನಾಡಿ, ‘ವೈದ್ಯರು ಸರಿಯಾಗಿ ಕೆಲಸ ನಿರ್ವಹಿಸಿದಿದ್ದರೆ ಅಂತವರ ಹೆಸರು ಬರೆದು ಅರ್ಜಿ ನೀಡಿದರೆ ಅವರ ಮೇಲೆ ಕ್ರಮ ಕೈಕೊಳ್ಳಲಾಗುವುದು’ ಎಂದರು.

ದಲಿತ ಮುಖಂಡ ಪ್ರಭಾಕರ ಭಜಂತ ಮಾತನಾಡಿ, ‘ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ₹ 21ಲಕ್ಷ ಶಿಷ್ಯವೇತನ ದೊರೆತಿಲ್ಲ. ಸಂಬಂಧಪಟ್ಟ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರಿಂದ ವಿದ್ಯಾರ್ಥಿಗಳು ವೇತನದಿಂದ ವಂಚಿತರಾಗಿದ್ದಾರೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ದಲಿತರಿಗೆ ಸಾಲ ವಿತರಿಸುತ್ತಿಲ್ಲ’ ಎಂದರು.

ಮುಖಂಡ ಮುಖಂಡ ಗಂಗಪ್ಪ ಭರಮಣ್ಣವರ ಶಂಕರ ಕೋರಿಕೊಪ್ಪ, ಸುರೇಶ ರಾಯಪ್ಪಗೋಳ, ರುದ್ರಪ್ಪ ನಿಂಗಣ್ಣವರ, ಮಂಜುನಾಥ ಶಿಡ್ಲವಗೋಳ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆ ಜನಪರ ಕೆಲಸ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಉಪಾಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪ ಅರಕೇರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಲ್ಲೂಕು ಪಂಚಾಯ್ತಿ ಇಒ ವಿ.ಜಿ.ಹಿತ್ತಲಮನಿ, ಕ್ರೈಂ ಪಿಎಸ್ಐ ಎಂ.ಎಸ್.ಮಠಪತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ವಸಂತ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಕ್ಷೇತ್ರಶಿಕ್ಷಣಾಧಿಕಾರಿ ಬಿ.ಕೆ. ನಂದನೂರ, ಸಹಾಯಕ ಕೃಷಿ ನಿರ್ದೇಶಕ ಮಹಾಬಳೇಶ್ವರ ಹೊಸಮನಿ, ಪುರಸಭೆ ಸದಸ್ಯ ಶಿವಯೋಗಿ ಹುಲ್ಲೆಣ್ಣವರ, ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.