ADVERTISEMENT

ಆಧಾರ ಸಂಖ್ಯೆ ಜೋಡಣೆಗೆ ಪರದಾಟ

ಸಿಬ್ಬಂದಿ–ಖಾತೆದಾರರ ನಡುವೆ ವಾಗ್ವಾದ: ಗ್ರಾಹಕರ ಸಂಖ್ಯೆಗೆ ತಕ್ಕ ಹಾಗೇ ಕೌಂಟರ್ ಹೆಚ್ಚಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 11:31 IST
Last Updated 20 ಜುಲೈ 2017, 11:31 IST

ಚನ್ನಮ್ಮನ ಕಿತ್ತೂರು: ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತಮ್ಮ ಉಳಿತಾಯ ಖಾತೆಗಳಿಗೆ ಆಧಾರ ಸಂಖ್ಯೆ ಜೋಡಣೆ ಮಾಡಲು ಗ್ರಾಹಕರು ಹರಸಾಹಸ ಪಡುತ್ತಿದ್ದಾರೆ.

ಬ್ಯಾಂಕ್ ಬಾಗಿಲು ತೆರೆದ ಕೂಡಲೇ ಸಾಲಿನಲ್ಲಿ ನಿಲ್ಲುವ ಗ್ರಾಹಕರ ಸಂಖ್ಯೆ ಹೆಚ್ಚುತ್ತ ಹೋಗಿ ಹನುಮಂತನ ಬಾಲದಂತೆ ಬೆಳೆಯುತ್ತ ಹೋಗುತ್ತದೆ. ಆದರೆ ನಿಂತ ಗ್ರಾಹಕನಿಗೆ ಸಂಖ್ಯೆ ಇಂದೇ ಜೋಡಣೆಯಾಗುತ್ತದೆ ಎಂಬ ನಂಬಿಕೆ ಇರುವುದಿಲ್ಲ. ಏಕೆಂದರೆ, ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಆಧಾರ ಸಂಖ್ಯೆ ಜೋಡಣೆ ಮಾಡಲು ಬ್ಯಾಂಕ್‌ ಸಿಬ್ಬಂದಿ ಅನುಮತಿ ನೀಡಿದ್ದು, ಗ್ರಾಹಕರ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗುತ್ತಿದೆ.

‘ಬೇಗ ಎದ್ದು ಮನೆಗೆಲಸು ಮಾಡಿಕೊಂಡು ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ ತೆಗೆದುಕೊಂಡು ಜೋಡಣೆಗೆ ಬಂದೆ. ಈಗ ನೋಡಿದರೆ ಬಂದ್‌ ಮಾಡಿದ್ದೇವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಊರಿಗೆ ಹೋಗಿ ಪುನಃ ನಾಳೆಗೆ  ಬರಬೇಕು. ಎಲ್ಲ ಕೆಲಸ ಬಿಟ್ಟು ಇದನ್ನೆ ಮಾಡುವುದಾಗಿದೆ’ ಎಂದು ಸುಶೀಲಾ ಹಳೇಮನಿ ಅಳಲು ತೋಡಿಕೊಂಡರು.

ADVERTISEMENT

‘ನಾವು ಸಾಲಿನಲ್ಲಿ ನಿಂತಾಗ ಇಷ್ಟು ಸಂಖ್ಯೆಯ ಗ್ರಾಹಕರ ಆಧಾರ ಅಂಕಿ ಜೋಡಣೆ ಮಾಡುತ್ತೇವೆ ಎಂದು ಏಕೆ ಹೇಳಿ ಕಳಸಲಿಲ್ಲ. ದೂರದ ಸಾಲಿನಲ್ಲಿ ನಿಂತು ಈಗ ಕೌಂಟರ್ ಸಮೀಪ ಬಂದಾಗ ಮುಗೀತು, ನಾಳೆ ಬನ್ನಿ ಎಂದರೆ ನಮಗೆ ಕೋಪ ಬರದೇ ಇರು ತ್ತದೆಯೇ’ ಎನ್ನುತ್ತಾರೆ ರಹೀಂ ಪಟೇಲ್.

‘ಸರ್ಕಾರ ಏನಾದರೊಂದು ‘ಕಾಯ್ದೆ’ ತಂದು ಬ್ಯಾಂಕ್ ಗ್ರಾಹಕರನ್ನು ಗೋಳು ಹೊಯ್ಯುಕೊಳ್ಳುತ್ತಿದೆ. ಆಧಾರ ಸಂಖ್ಯೆ ಜೋಡಣೆ ಮಾಡದಿದ್ದರೆ ಖಾತೆ ಸ್ಥಗಿತಗೊಳಿಸಲಾಗುತ್ತದೆ ಎಂಬ ಬೆದರಿಕೆ ಬೇರೆ. ಇಲ್ಲಿ ಬಂದರೆ ಈ ಗೋಳು ಯಾರು ಮುಂದೆ ಹೇಳೋದು’ ಎಂದು ಬಸವರಾಜ ಗಡಾದ ಅಸಮಾಧಾನ ತೋಡಿಕೊಂಡರು.

ಸಿಬ್ಬಂದಿ ಕೊರತೆ: ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಕೇಳಿದರೆ, ನೌಕರರ ಕೊರತೆಯಿದೆ. ನಾವಾದರೂ ಏನು ಮಾಡಬೇಕು ಎಂಬುದು ತಿಳಿಯದಾಗಿದೆ ಎನ್ನುತ್ತಾರೆ.

ಮೇಲಧಿಕಾರಿಗಳು ಅಗತ್ಯವಿರುವ ಸಿಬ್ಬಂದಿ ಇಲ್ಲಿ ನಿಯೋಜಿಸಬೇಕು. ಆಧಾರ ಸಂಖ್ಯೆ ಜೋಡಣೆಗೆ ಹೆಚ್ಚು ಕೌಂಟರ್‌ ತೆರೆಯಬೇಕು. ಅದಾಗದಿದ್ದರೆ ಗ್ರಾಹಕರನ್ನು ಮರಳಿ ಕಳಿಸದೇ ಸರತಿಯಲ್ಲಿರುವ ಎಲ್ಲರ ಬಳಿಯ ಆಧಾರ್‌ ಝರಾಕ್ಸ್ ಪ್ರತಿ ಪಡೆದುಕೊಂಡು ನಿಧಾನವಾಗಿ ಅವರವರ ಖಾತೆಗಳಿಗೆ ಜೋಡಣೆ ಮಾಡಿಕೊಳ್ಳಲಿ’ ಎಂಬುದು ಗ್ರಾಹಕರ ಆಗ್ರಹವಾಗಿದೆ.

**

ಮಹಿಳೆಯರು ಮಕ್ಕಳು ಸಮೇತ ಬಂದು ಸರದಿಯಲ್ಲಿ ನಿಲ್ಲುತ್ತಾರೆ. 1 ಗಂಟೆಗೆ  ಬಂದ್‌ ಮಾಡಿದರೆ ಬೆಳಿಗ್ಗೆಯಿಂದ ಪಾಳಿ ಹಚ್ಚಿದವರ ಎಲ್ಲರ ಗತಿ ಹೇಗಾಗಬೇಡ..
ಸಲೀಂ
ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.