ADVERTISEMENT

ಕಲ್ಮಠದಲ್ಲಿ ದ್ವಿತೀಯ ರಥೋತ್ಸವ ಸಂಭ್ರಮ

ಸದಾಶಿವ ಮಿರಜಕರ
Published 12 ಡಿಸೆಂಬರ್ 2017, 8:53 IST
Last Updated 12 ಡಿಸೆಂಬರ್ 2017, 8:53 IST

ಸವದತ್ತಿ: ನಾಡಿನ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸುವ ಜತೆಗೆ ಅಧ್ಯಾತ್ಮದ ಮೂಲಕ ಧರ್ಮ ಜಾಗೃತಿಯಲ್ಲಿ ನಿರತರಾಗಿದ್ದ, ಲಿಂ. ಬಿದರಿ ಕುಮಾರ ಶಿವಯೋಗಿಗಳ 107ನೇ ಪುಣ್ಯಸ್ಮರಣೋತ್ಸವ ಇದೇ 12ರಿಂದ 23ರವರೆಗೆ ನಡೆಯಲಿದೆ.

ಪೀಠಾಧಿಪತಿ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳೂ ನಡೆಯಲಿವೆ.ನಾಡಿನ ಅಧ್ಯಾತ್ಮ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಗುರುತಿಸಿಕೊಂಡವರಲ್ಲಿ ಸವದತ್ತಿ ಕಲ್ಮಠದ ಬಿದರಿ ಕುಮಾರ ಶಿವಯೋಗಿಗಳು ಪ್ರಮುಖರಾಗಿದ್ದಾರೆ. ವೀರಶೈವ ಧರ್ಮ ಸ್ಥಾಪನೆಯಾದಾಗ ಅದಕ್ಕೆ ಚಲನಶೀಲತೆ ಒದಗಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಮಲಪ್ರಭಾ ನದಿ ದಡದಲ್ಲಿ ಈಗಿನ ಒಡಕಹೊಳೆಯ ದುರ್ಗಮ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಆ ಯೋಗಿಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದರು. ಎರಡು ತಿಂಗಳ ಕಠಿಣ ತಪಸ್ಸು ಮಾಡಿ ಭಕ್ತರ ಮನದಾಸೆಯಂತೆ ಪಟ್ಟಣಕ್ಕೆ ಬಂದಿದ್ದರು. ಭಕ್ತರಿಗೆ ಅಧ್ಯಾತ್ಮ, ಪ್ರವಚನಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು. ಸಮಾಜಸೇವಾ ಮನೋಭಾವ ಬೆಳೆಸುವ ಮಹತ್ತರ ಕಾರ್ಯ ಮಾಡಿದವರು ಎಂದು ಭಕ್ತರು ನೆನೆಯುತ್ತಾರೆ.

ADVERTISEMENT

ಧರ್ಮಪ್ರಚಾರಕರು: ಶರಣರ ತತ್ವ ಬಿತ್ತುವ ಮಹತ್ವದ ಕಾರ್ಯ ಮಾಡಿದವರು. ತಮ್ಮಂತಹ ಅನೇಕ ಸಾಧಕರನ್ನು ತಯಾರಿಸುವ ಉದ್ದೇಶದಿಂದ ಶಿವಯೋಗಿ ಮಂದಿರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು.

ದೇಶದ ಅನೇಕ ಪಟ್ಟಣಗಳಿಗೆ ಕಾಲ್ನಡಿಗೆ, ಚಕ್ಕಡಿ ಮೂಲಕ ಪ್ರಯಾಣ ಮಾಡುವ ಮೂಲಕ ವೀರಶೈವ ಧರ್ಮ ಜಾಗೃತಗೊಳಿಸಲು ದುಡಿದವರು. ಕುಮಾರ ಶಿವಯೋಗಿಗಳ ರಥೋತ್ಸವವು ಇದೇ 23ರಂದು ಸಂಜೆ ಸಂಭ್ರಮದಿಂದ ನೆರವೇರಲಿದೆ. ಅಲ್ಲಿವರೆಗೆ ಪ್ರವಚನ ಜರುಗಲಿದೆ. ಶಾಸಕ ಆನಂದ ಮಾಮನಿ ಹಾಗೂ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ ಎಂದು ಶ್ರೀಮಠದ ಶಿವಲಿಂಗ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.