ADVERTISEMENT

ಕಾಲುವೆ ಒತ್ತುವರಿ: ಕಂಗೆಟ್ಟ ಕುಟುಂಬಗಳು

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:50 IST
Last Updated 23 ಮೇ 2017, 8:50 IST
ನಿಂತ ನೀರು ಇಂಗಿ ವಾಸಕ್ಕೆ ಆಯೋಗ್ಯವಾಗಿರುವ ಮನೆ (ಮೇಲಿನ ಚಿತ್ರ) ಮಳೆ ನೀರಿನಿಂದ ಬಿರುಕು ಬಿಟ್ಟಿರುವ ಗೋಡೆ
ನಿಂತ ನೀರು ಇಂಗಿ ವಾಸಕ್ಕೆ ಆಯೋಗ್ಯವಾಗಿರುವ ಮನೆ (ಮೇಲಿನ ಚಿತ್ರ) ಮಳೆ ನೀರಿನಿಂದ ಬಿರುಕು ಬಿಟ್ಟಿರುವ ಗೋಡೆ   

ಸಂಪಗಾಂವ (ಚನ್ನಮ್ಮನ ಕಿತ್ತೂರು): ‘ಸರ್ಕಾರಿ ಕಾಲುವೆ ಮುಚ್ಚಿ ಉಳುಮೆ ಮಾಡಿಕೊಂಡಿದ್ದಾರೆ, ಮಳೆ ಬಂತೆಂದರೆ ನೀರು ಇಳಿಜಾರು ಪ್ರದೇಶದಿಂದ ಧುಮ್ಮಿಕ್ಕುತ್ತದೆ. ಹೀಗೆ ರಭಸದಿಂದ ಹರಿದು ಬಂದ ನೀರು ಮುಂದೆ ಹೋಗಲಾರದೆ ಮನೆಯೊಳಗೆ ನುಗ್ಗುತ್ತದೆ, ಮಕ್ಕಳು– ಮರಿ ಇರುವ ಕುಟುಂಬಗಳ ರಕ್ಷಿಸುವರಾರು...’

ಕಿತ್ತೂರು ವಿಧಾನಸಭಾ ವ್ಯಾಪ್ತಿಯ ಸಂಪಗಾಂವ ಗ್ರಾಮದ ಹಳೇ ಜನತಾ ಕಾಲೊನಿಯ ಕೆಲ ಕುಟುಂಬಗಳನ್ನು ಹಲವಾರು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆ ಇದು.
‘ಈ ಸಮಸ್ಯೆಯನ್ನು ಪರಿಹರಿಸಿ ಕಡುಬಡವರ ಕುಟುಂಬಗಳನ್ನು ರಕ್ಷಿಸಬೇಕಾದ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ತಾಲ್ಲೂಕು ಅಧಿಕಾರಿಗಳು ತೆಪ್ಪಗೆ ಕುಳಿತಿದ್ದಾರೆ’ ಎಂದು ಈ ಕಾಲೊನಿ ನಿವಾಸಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘ಸಂಪಗಾಂವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಬಳಿಯಿರುವ ಸ್ಥಳದಲ್ಲಿ ಜನತಾ ಮನೆಗಳು ನಿರ್ಮಾಣಗೊಂಡು ಎರಡು ದಶಕಗಳೇ ಕಳೆದಿವೆ. ಈ ಕಾಲೊನಿ ಬಳಿಯೇ ಕಂದಕದಂತಹ ದೊಡ್ಡ ಸರ್ಕಾರಿ ಕಾಲುವೆ ಇತ್ತು. ನಾಗನೂರು ಮರಡಿ ನೀರು ಈ ಕಾಲುವೆ ಮೂಲಕ ಹರಿದು ಬಸ್‌ನಿಲ್ದಾಣ ಪಕ್ಕದ ಊರ ದೊಡ್ಡ ಕೆರೆಯನ್ನು ಸೇರುತ್ತಿತ್ತು.

ADVERTISEMENT

ಈಗ ಕೆಲ ವರ್ಷಗಳ ಹಿಂದೆ ಇದೇ ಸರ್ಕಾರಿ ಕಾಲುವೆಯನ್ನು ಮುಚ್ಚಿ ವ್ಯಕ್ತಿಯೊಬ್ಬರು ಉಳುಮೆ ಮಾಡಿದ್ದರಿಂದ ಮಳೆಗಾಲದಲ್ಲಿ ನೀರು ಕೆರೆ ಸೇರುತ್ತಿಲ್ಲ. ಬದಲಾಗಿ ಜನತಾ ಕಾಲೊನಿ ನಿವಾಸಿಗಳ ಹತ್ತಾರು ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ’ ಎಂದು ಸಂತ್ರಸ್ತರಾದ ಶರೀಫಾ ಉಮಚಗಿ, ಅಲ್ಲಾಬಕ್ಷ ನದಾಫ, ಇಮಾಮಸಾಬ ನದಾಫ, ಫಕ್ಕೀರಪ್ಪ ಕಲ್ಲಗುಡಿ, ಬಸಪ್ಪ ಕೋಟಗಾರ, ಹುಸೇನಸಾಬ ಮಕ್ಕಳಗೇರಿ ತಮ್ಮ ನೋವು ತೋಡಿಕೊಂಡರು.

‘ಮಳೆಗಾಲದಲ್ಲಿ ಮೂರ್‍ನಾಲ್ಕು ಅಡಿ ನೀರು ಒಳನುಗ್ಗಿ ಬರುತ್ತದೆ. ಇದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಒಂದು ಮನೆಯಂತೂ ಇರಲಿಕ್ಕೆ ಯೋಗ್ಯವಾಗಿಲ್ಲ. ಅಧಿಕ ಪ್ರಮಾಣದ ನೀರು ನುಗ್ಗಿ ಬಂದು ಮನೆಯಲ್ಲಿಯ ಕಾಳು,ಕಡಿ, ಮಾಡಿದ ಅಡುಗೆ ನಾಶವಾಗಿ ಹೋದ ಉದಾಹರಣೆಗಳು ಸಾಕಷ್ಟಿವೆ. ನೀರು ನುಗ್ಗಿ ಬಂದಾಗ ಹತ್ತಾರು ಮನೆಗಳ ಕುಟುಂಬಸ್ಥರು ಮಕ್ಕಳ ಸಮೇತ ಕಾಲೊನಿ ಮೇಲ್ಭಾಗದಲ್ಲಿರುವ ಗಣಪತಿ ಗುಡಿಯೊಳಗೆ ತೆರಳಿ ಮಲಗಿಕೊಂಡು ರಾತ್ರಿ ಕಳೆದಿದ್ದೇವೆ’ ಎಂದು ಅವರು ತಮ್ಮ ದಾರುಣ ಕತೆಯ ವಿವರ ನೀಡಿದರು.

‘ಸುಮಾರು 200 ಅಡಿಯವರೆಗೆ ಮಾತ್ರ ದೊಡ್ಡ ಕಾಲುವೆ ಮುಚ್ಚಿ ಸಾಗುವಳಿ ಮಾಡಿದ್ದಾರೆ. ಮುಂದೆ ಹಾಗೂ ಹಿಂದಿನ ಕಾಲುವೆ ಸರಿಯಾಗಿ ಇದೆ. ಈ ಅತಿಕ್ರಮಣವಾಗಿರುವ ಕಾಲುವೆಯನ್ನು ಗ್ರಾಮ ಪಂಚಾಯ್ತಿ ಅಥವಾ ಬೈಲಹೊಂಗಲ ತಾಲ್ಲೂಕು ಆಡಳಿತ ತೆರವುಗೊಳಿಸಿದರೆ ಮಳೆಗಾಲ ದಲ್ಲಿ ರಾತ್ರಿ ಹೊತ್ತು ಯಾವುದೇ ಅನಾಹುತದ ಕನವರಿಕೆಯಿಲ್ಲದೆ ನಿದ್ದೆ ಮಾಡುತ್ತೇವೆ. ಇಲ್ಲದಿದ್ದರೆ ಈ ಮಳೆಗಾಲದಲ್ಲೂ ಗುಡಿ ಕಟ್ಟೆಯೇ ಎಂದಿನಂತೆ ನಮಗೆ  ಆಶ್ರಯವಾಗಲಿದೆ’ ಎನ್ನುತ್ತಾರೆ ಅವರು.

ಯಾರು ಜವಾಬ್ದಾರಿ?: ‘ಬೇಸಿಗೆಯಲ್ಲಿ ಹೇಗಾದರೂ ಕಾಲ ಕಳೆಯಬಹುದು. ಆದರೆ ಮಳೆಗಾಲದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಬಂದು ಏನಾದರೂ ಮಕ್ಕಳ ಜೀವಕ್ಕೆ ಹಾನಿಯಾದರೆ ಯಾರು ಹೊಣೆ’ ಎಂದು ವಿಚಲಿತರಾಗಿ ಪ್ರಶ್ನಿಸಿದ ವರು ಶಕಿಲಾ ಬಾಯಿ ನದಾಫ ಮತ್ತು ರಿಯಾನ್ ನದಾಫ. ‘ಬಡವರ ಕಷ್ಟವನ್ನು ಸಂಸದ, ಶಾಸಕ, ತಾಲ್ಲೂಕು ಆಡಳಿತವಾಗಲಿ ಅಥವಾ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಾಗಲಿ ಗಮನಿಸಿ ಪರಿಹಾರ ಸೂಚಿಸಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.