ADVERTISEMENT

ಕುರುಬರ ಅಭಿವೃದ್ಧಿಗೆ ಶ್ರಮಿಸಿದ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:37 IST
Last Updated 18 ಏಪ್ರಿಲ್ 2018, 5:37 IST

ರಾಮದುರ್ಗ: ‘ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದವರು ಕುರುಬ ಸಮಾಜದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ’ ಎಂಬುದನ್ನು ಸಮಾಜದ ಪ್ರತಿಯೊಬ್ಬರೂ ಗುರುತಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮುಂಬರುವ ಚುನಾವಣೆಯಲ್ಲಿ ವಿವೇಚನೆಯಿಂದ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಪ್ರದೇಶ ಕುರುಬ ಸಮಾಜದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.

ಇಲ್ಲಿನ ಶ್ರೀನಿವಾಸ ಆಯಿಲ್‌ ಮಿಲ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಕುರುಬ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸಮಾಜ ನಮಗೇನು ಮಾಡಿದೆ ಎನ್ನುವದಕ್ಕಿಂತ ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎನ್ನುವುದನ್ನು ಎಲ್ಲರೂ ಮೊದಲು ಅರಿಯಬೇಕು. ನೀವು ಯಾವುದೇ ಪಕ್ಷಕ್ಕೆ ಅಂಟಿಕೊಂಡಿದ್ದರೂ ಸಮಾಜದ ಹಿತ ಕಾಯಲು ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ವಿಠ್ಠಲ ಜಟಗನ್ನವರ, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಮೊರಬದ, ಮಾಜಿ ಅಧ್ಯಕ್ಷ ಮಲ್ಲಪ್ಪ ಸೋಮಗೊಂಡ, ಅವರಾದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲಮ್ಮ ಮೋಟೆ, ಶೆಟ್ಟೆಪ್ಪ ಗಡದೆ, ಶೇಖರ ಕರಲಿಂಗಪ್ಪನವರ, ಸಿದ್ದಪ್ಪ ಮುಕೈನವರ, ಲಕ್ಕಪ್ಪ ಚುಂಚನೂರ ಇದ್ದರು.

ADVERTISEMENT

ಗೊಂದಲದ ಗೂಡಾದ ಸಮಾವೇಶ: ‘ಶಾಸಕ ಅಶೋಕ ಪಟ್ಟಣ ಅವರನ್ನು ಶಾಸಕರಾಗಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮತ್ತೊಮ್ಮೆ ಆಯ್ಕೆ ಮಾಡಲು ಬೆಂಬಲ ಕೋರುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕೆಲವರು ಆರಂಭದಲ್ಲಿ ಪ್ರಕಟಿಸಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ‘ಸಮಾಜದ ಜನ ಬೇರೆ ಬೇರೆ ಪಕ್ಷಕ್ಕೆ ಅಂಟಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇವಲ ಒಂದು ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಗೊಂದಲವಾಗಬಹುದು ಎಂಬ ಸುಳಿವು ಅರಿತ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ಶಾಸಕ ಅಶೋಕ ಪಟ್ಟಣ, ಅರವಿಂದ ದಳವಾಯಿ, ಶಿವಾನಂದ ಕರಿಗಾರ ಸಮಾವೇಶಕ್ಕೆ ಹಾಜರಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.