ADVERTISEMENT

ಕೃಷ್ಣಾ ನದಿಗೆ 4400 ಕ್ಯೂಸೆಕ್‌ ನೀರು

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:12 IST
Last Updated 22 ಮೇ 2017, 7:12 IST

ಚಿಕ್ಕೋಡಿ: ರಾಜ್ಯದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರದ ಮನವಿ ಮೇರೆಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು  ಇಲ್ಲಿನ ಉಪ ವಿಭಾಗಾಧಿಕಾರಿ ಗೀತಾ ಕೌಲಗಿ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 10ರಿಂದ ಕೊಯ್ನಾ ಜಲಾಶಯದ ಮೂಲಕ 4400 ಕ್ಯೂಸೆಕ್‌ ನೀರು ಹರಿಸಲಾಗಿದೆ. ಸಂಜೆ 4ರಿಂದ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ರಾಜಾಪುರ ಬ್ಯಾರೇಜ್‌ನ ಮೂಲಕ 1016 ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಅದು ಅಥಣಿ ತಾಲ್ಲೂಕಿನ ಜುಗೂಳ ಮತ್ತು ಮಂಗಾವತಿ ತಲುಪಿದ್ದು, ಸೋಮವಾರ ಬೆಳಿಗ್ಗೆಯವರೆಗೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮವನ್ನು ತಲುಪಲಿದೆ ಎಂದು ಅವರು ಹೇಳಿದರು.

‘ಪ್ರಸಕ್ತ ಬರಗಾಲ ಪರಿಸ್ಥಿತಿಯಲ್ಲಿ ಎದುರಾಗಿರುವ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಿಸಲಾಗಿದ್ದು, ಇದನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು’ ಎಂದು ಗೀತಾ ಕೌಲಗಿ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.