ADVERTISEMENT

‘ಕೆಎಲ್‌ಇ ದೇಶವೇ ಹೆಮ್ಮೆ ಪಡುವ ಸಂಸ್ಥೆ’

ಬೆಳಗಾವಿ: ಕೆಎಲ್‌ಇ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2016, 6:31 IST
Last Updated 18 ನವೆಂಬರ್ 2016, 6:31 IST

ಬೆಳಗಾವಿ: ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆ ಮಾಡಿರುವ ಸಾಧನೆಯು ಕೇವಲ ಕರ್ನಾಟಕ ಅಲ್ಲ, ದೇಶವೇ ಹೆಮ್ಮೆ ಪಡುವಂತಹದ್ದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಇಲ್ಲಿನ ಲಿಂಗರಾಜ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಶಿಕ್ಷಣ ನೀಡುವುದರ ಜೊತೆಗೆ ದೇಶಕ್ಕೆ ಉತ್ತಮ ನಾಗರಿಕರನ್ನು ನೀಡಿದ ಸಾಧನೆಯನ್ನು ಕೆಎಲ್‌ಇ ಸಂಸ್ಥೆ ಮಾಡಿದೆ. ಶಿಕ್ಷಣ, ವೈದ್ಯಕೀಯ ಜೊತೆಗೆ ಸಂಶೋಧನಾ ರಂಗಕ್ಕೂ ಅಪ್ರತಿಮ ಕೊಡುಗೆ ನೀಡಿದೆ’ ಎಂದು ನುಡಿದರು.

‘ದೇಶದಲ್ಲಿ ಜ್ಞಾನಕ್ಕೆ ಕೊರತೆ ಇಲ್ಲ. ಈ ಜ್ಞಾನವನ್ನು ಬಳಸಿಕೊಂಡು ಸಂಪತ್ತು ಸೃಷ್ಟಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಇದೆ. ಇದು ಭವಿಷ್ಯ ಭಾರತದ ಅವಶ್ಯಕತೆಯೂ ಆಗಿದೆ. ಸಂಶೋಧನಾ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸಗಳಾಗಬೇಕಾಗಿದೆ’ ಎಂದರು.

ರಸ್ತೆ, ರೈಲು, ಜಲ ಮಾರ್ಗಗಳು ಉತ್ತಮವಾಗಿದ್ದರೆ ದೇಶದ ಅಭಿವೃದ್ಧಿ ಸಹಕಾರಿಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ 90 ಸಾವಿರ ಕಿ.ಮೀ ಉದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿದ್ದವು. ಈಗ 1.75 ಲಕ್ಷ ಕಿ.ಮೀ ಉದ್ದ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಪ್ರತಿದಿನ 22 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಎಂದು ನುಡಿದರು.

ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ಆಶಯದಂತೆ ದೇಶದ ಹಳ್ಳಿ ಹಳ್ಳಿಗೂ ರಸ್ತೆ ಸಂಪರ್ಕ ನಿರ್ಮಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ರೂಪಿಸಲಾಯಿತು. ದೇಶದ 6.5 ಲಕ್ಷ  ಗ್ರಾಮಗಳ ಪೈಕಿ 1.70 ಲಕ್ಷ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮಗಳ ಚಿತ್ರಣ ಬದಲಾಗಿದ್ದು, ಅಭಿವೃದ್ಧಿಯತ್ತ ಹೆಜ್ಜೆ ಹಾಕಿವೆ ಎಂದರು.

ಪರ್ಯಾಯ ಇಂಧನ: ಪ್ರತಿ ವರ್ಷ ಅಂದಾಜು ₹7 ಲಕ್ಷ ಕೋಟಿ ಮೊತ್ತದ ಪೆಟ್ರೋಲ್‌, ಡೀಸೆಲ್‌ ಅನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಇಥೆನಾಲ್‌, ಜೈವಿಕ ಇಂಧನ ಉತ್ಪಾದಿಸಿದರೆ ಇಷ್ಟೊಂದು ದೊಡ್ಡ ಮೊತ್ತ ಉಳಿತಾಯವಾಗಲಿದೆ. ಇಥೆನಾಲ್‌, ಜೈವಿಕ ಇಂಧನ ಬಳಸಲು ಜನರು ಮುಂದಾಗಬೇಕು ಎಂದರು.
ನೀರು ಸಂರಕ್ಷಣೆಗೆ ಒತ್ತು:  ಮಳೆಯಿಂದ ಸುರಿಯುವ ನೀರು ಶೇ 70ರಷ್ಟು ಸಮುದ್ರ ಸೇರುತ್ತದೆ. ಇನ್ನುಳಿದ ಭಾಗದಲ್ಲಿ ಶೇ 15ರಷ್ಟು ನೀರು ಕೃಷಿ, ಕುಡಿಯಲು ಹಾಗೂ ಇನ್ನುಳಿದ ನೀರು ಭೂಮಿಯಲ್ಲಿ ಇಂಗಿಹೋಗುತ್ತದೆ. ಸಮುದ್ರಕ್ಕೆ ಸೇರುವ ನೀರನ್ನು ಬಳಸುವ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ನ ಸಹ–ಸ್ಥಾಪಕಿ ಸುಧಾಮೂರ್ತಿ ಮಾತನಾಡಿ, ನಾನು ಕಲಿತ ಶಿಕ್ಷಣ ಸಂಸ್ಥೆ 100 ವರ್ಷ ಆಚರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ಸಂಸ್ಥೆ ಸ್ಥಾಪನೆಯಾಗದಿದ್ದರೆ ನನ್ನಂತವರು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದ ಬಡವರು, ಮಹಿಳೆಯರಿಗೆ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆಯು ಕಾಮಧೇನುವಾಗಿದೆ ಎಂದರು.

ಸನ್ಮಾನ: ರಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಯಾಡಿದ್ದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿನಿ, ಟೆನಿಸ್‌ ಆಟಗಾರ್ತಿ ಪ್ರಾರ್ಥನಾ ಟೊಂಬ್ರೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೆಎಲ್‌ಇ ಸಂಶೋಧನಾ ವಿಭಾಗದ ಮುಖ್ಯಸ್ಥ ಅಮೆರಿಕದ ರಿಚರ್ಡ್‌ ಡರ್ಮನ್‌ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಅವರನ್ನು ಸನ್ಮಾನಿಸಲಾಯಿತು.

ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘2020ರಲ್ಲಿ ಟೊಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೂ ಪ್ರಾರ್ಥನಾ ಭಾಗಿಯಾಗಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಪ್ರಾರ್ಥನಾ ಸಾಕಾರಗೊಳಿಸಲಿದ್ದಾರೆ’ ಎಂದರು.

‘ಮೋದಿ ಅವರು ಬಯಸಿದಂತೆ ವಿಶ್ವದ 100 ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯುವುದು ಸಂಸ್ಥೆಯ ವಿದ್ಯಾರ್ಥಿಗಳ ಕೈಯಲ್ಲಿದೆ’ ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ನಿರ್ದೇಶಕ ಮಹಾಂತೇಶ ಕವಟಗಿಮಠ, ಎಸ್‌.ಸಿ ಮೆಟಗುಡ್ಡ, ಅಶೋಕ ಬಾಗೇವಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.