ADVERTISEMENT

ಕೇಂದ್ರ ಬಜೆಟ್‌ ರೈತ ವಿರೋಧಿ

ಹಸಿರುಸೇನೆ ರಾಜ್ಯ ಘಟಕದ ಬಸವರಾಜ ಮಳಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:45 IST
Last Updated 6 ಫೆಬ್ರುವರಿ 2017, 6:45 IST

ಯರಗಟ್ಟಿ:  ರೈತರ ಸಾಲ ಮನ್ನಾ ಹಾಗೂ ಕೃಷಿ ಉತ್ಪಾದನೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಬದಲಾಗಿ ಕೇಂದ್ರ ಸರ್ಕಾರವು ರೈತರಿಗೆ ಸುಳ್ಳು ಭರವಸೆ ನೀಡಿ ದಿಕ್ಕು ತಪ್ಪಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಮಳಲಿ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಬಜೆಟ್‌ ಸಂಪೂರ್ಣ ರೈತ ವಿರೋಧಿ. ರೈತರು ಸಾಲದಲ್ಲಿ ಸಿಕ್ಕು ನರಳುತ್ತಿದ್ದರೆ, ಸರ್ಕಾರ ರೈತರಿಗೆ ಹೆಚ್ಚು ಸಾಲ ನೀಡಿ ಮತ್ತಷ್ಟು ಸಾಲಗಾರರನ್ನಾಗಿ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದರು. ರೈತರ ಉತ್ಪಾ ದನೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಗೊಳಿಸಿಲ್ಲ’ ಎಂದು ಆರೋಪಿಸಿದರು.

‘ಸತತ ಮೂರು ನಾಲ್ಕು ವರ್ಷಗಳಿಂದ ಮಳೆಯಾಗದೆ ರೈತರು ಕಂಗಾಲಾಗಿದ್ದು, ಸಾಲ ಮಾಡಿ ಬೀಜ ಗೊಬ್ಬರ ತಂದು ಭೂಮಿ ಬಿತ್ತನೆ ಮಾಡಿದರೂ ಫಲ ಬಂದಿಲ್ಲ. ಇಂಥ ಸಂದರ್ಭದಲ್ಲಿ ಪ್ರಧಾನ ಮಂತ್ರಿ ರೈತರ ನೆರವಿಗೆ ಬಾರದೆ ಇರುವುದು ರೈತ ವಿರೋಧಿ ನೀತಿಯಾಗಿದೆ’ ಎಂದು ದೂರಿದರು.

‘ನೀರಾವರಿ ಯೋಜನೆಗಳು, ಮಹಾದಾಯಿ ನದಿ ನೀರು ತರುವ ವಿಷಯ, ಸಾಲ ಮನ್ನಾ, ವೈಜ್ಞಾನಿಕ ದರ ಸೇರಿ ಯಾವ ಭರವಸೆಯನ್ನು ರೈತರಿಗೆ ಬಜೆಟ್‌ನಲ್ಲಿ ತಿಳಿಸಿಲ್ಲ’ ಎಂದು ಅವರು ಆರೋಪಿಸಿದರು.

‘ರಾಜ್ಯದಲ್ಲಿ ಭೀಕರ ಬರ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ದನ ಕರುಗಳಿಗೆ ಕುಡಿಯುವ ನೀರು, ಮೇವು ಒದಗಿಸಬೇಕು. ಉದ್ಯೋಗ ಅರಸಿ ವಲಸೆ ಹೋಗುವವರನ್ನು ನಿಲ್ಲಿಸಬೇಕು.

ಗೋ ಶಾಲೆಗಳ ಬದಲಾಗಿ ಜಾನುವಾರಗಳ ಸಂಖ್ಯೆಗೆ ಅನುಗುಣವಾಗಿ ನಿತ್ಯ ಪ್ರತಿ ದನಕ್ಕೆ ₹ 100, ಕರುವಿಗೆ ₹ 70, ಆಡು ಕುರಿಗಳಿಗೆ ₹ 80ರಂತೆ ರೈತರ ಖಾತೆಗೆ ಹಣ ಜಮಾ ಮಾಡಬೇಕು’ ಎಂದು ಆಗ್ರಹಿಸಿದರು.‘ಬರ ಕಾಮಗಾರಿಗಳಲ್ಲಿ ಹೊಸ ಕೆರೆಗಳ ನಿರ್ಮಾಣ ಕೈಗೆತ್ತಿಕೊಳ್ಳಬೇಕು. ರೈತ ಕಾರ್ಮಿಕರ, ರೈತ ಮಹಿಳೆಯರಿಗೆ ಕಿರುಸಾಲ ನೀಡಬೇಕು. ಸಾಲ ವಸೂಲಿ ತಕ್ಷಣ ನಿಲ್ಲಿಸಬೇಕು ಎಂದರು.

ರೈತರಿಗೆ ನೋಟಿಸ್‌ ನೀಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಮುಖಂಡರಾದ ಸೋಮು ನಾವಿ, ಗೂಳಪ್ಪಾ ಭಾವಿಕಟ್ಟಿ, ಮಹಾಂತೇಶ ಬೆಟ್ಟದ, ಎಸ್.ಎನ್. ಕಾತ್ರಾಳ, ಎಲ್. ನಾಯ್ಕರ, ಲಗಮಣ್ಣ ಕುರಬೇಟ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.