ADVERTISEMENT

ಕೇಬಲ್‌ ಶುಲ್ಕ ವಸೂಲಿಗಿಲ್ಲ ಕಡಿವಾಣ!

ಕೆಲವೆಡೆ ₹250, ₹300ಕ್ಕಿಂತಲೂ ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಆಪರೇಟರ್‌ಗಳು; ಆಕ್ಷೇಪ

ಎಂ.ಮಹೇಶ
Published 23 ಮಾರ್ಚ್ 2017, 9:42 IST
Last Updated 23 ಮಾರ್ಚ್ 2017, 9:42 IST

ಬೆಳಗಾವಿ: ನಗರ ಹಾಗೂ ಜಿಲ್ಲೆಯಲ್ಲಿ ಟಿವಿಗಳಿಗೆ ಕೇಬಲ್‌ ಸಂಪರ್ಕ ನೀಡುವುದಕ್ಕೆ ಪಡೆಯಲಾಗುವ ಶುಲ್ಕವನ್ನು ಮನಬಂದಂತೆ ವಿಧಿಸಲಾಗುತ್ತಿದ್ದು, ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

‘100 ಚಾನಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ ₹130 ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚಿನ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಕೇಬಲ್‌ ಸಂಪರ್ಕಕ್ಕೆ ಶುಲ್ಕವನ್ನು ಈಚೆಗಷ್ಟೇ ನಿಗದಿಪಡಿಸಿದೆ.

100ಕ್ಕಿಂತ ಹೆಚ್ಚುವರಿ 25 ಚಾನಲ್‌ಗಳಿಗೆ ಹೆಚ್ಚುವರಿಯಾಗಿ ₹20 ಮಾತ್ರ ಶುಲ್ಕ ಪಡೆಯಬೇಕು ಎಂದು ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ ಅವರು ವಿಧಾನಪರಿಷತ್ತಿನಲ್ಲಿ ಸೋಮವಾರ ತಿಳಿಸಿದ್ದಾರೆ.

ಇದರೊಂದಿಗೆ, ನಗರ ಹಾಗೂ ಜಿಲ್ಲೆಯಲ್ಲಿ ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ಅಕ್ರಮವಾಗಿ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಶುಲ್ಕ ಸಂಗ್ರಹಿಸುವುದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಸಮಿತಿಗಳಿಗೆ ಸೂಚಿಸಲಾಗುವುದು ಎಂದು ಗೃಹಸಚಿವರು ವಿಧಾನ ಪರಿಷತ್ತಿನಲ್ಲಿ ಹೇಳಿದ್ದರು. ಈವರೆಗೂ ಈ ನಿಟ್ಟಿನಲ್ಲಿ ಜಿಲ್ಲಾಡಳಿತಗಳಿಗೆ ಯಾವುದೇ ನಿರ್ದೇಶನ ಬಂದಿಲ್ಲ!.

ಕೇಬಲ್‌ ಕೂಡ ನಮ್ಮ ಹಣದಲ್ಲೇ!: ಮನೆ, ಕಚೇರಿ ಅಥವಾ ಸಂಸ್ಥೆಗಳಿಗೆ ಹೊಸದಾಗಿ ಕೇಬಲ್‌ ಸಂಪರ್ಕ ಪಡೆದರೆ ಒಂದು ತಿಂಗಳ ಅಡ್ವಾನ್ಸ್‌ ನೀಡಬೇಕು. ಸೆಟ್‌ಟಾಪ್‌ ಬಾಕ್ಸ್‌ಗೆಂದು ಇಂತಿಷ್ಟು ಹಣ ಕೊಡಬೇಕು. ಅದನ್ನು ಅಳವಡಿಸಿಕೊಳ್ಳುವುದಕ್ಕೂ ಸರ್ವಿಸ್‌ ಶುಲ್ಕವೆಂದು ಹಣ ನೀಡಬೇಕು.

ಇದಕ್ಕೆ ಬೇಕಾಗುವ ಕೇಬಲ್ (ವೈರ್‌) ಕೂಡ ಗ್ರಾಹಕರ ಹಣದಲ್ಲಿಯೇ ತರಿಸಿಕೊಳ್ಳಲಾಗುತ್ತಿದೆ. ಕೇಳಿದಷ್ಟು ಹಣ ಕೊಡಲು ನಿರಾಕರಿಸಿದರೆ, ಕೇಬಲ್ ಸಂಪರ್ಕ ನೀಡಲು ನಿರಾಕರಿಸುವುದೂ ಸಾಮಾನ್ಯವಾಗಿ ಹೋಗಿದೆ.

ಜಿಲ್ಲೆಯಲ್ಲಿ ಹಲವು ಕೇಬಲ್‌ ಆಪರೇಟರ್‌ ಕಂಪೆನಿಗಳಿದ್ದು, ಒಂದಕ್ಕೊಂದು ಪೈಪೋಟಿಯ ಮೇಲೆ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಗ್ರಾಹಕರರ ಅನಿವಾರ್ಯವನ್ನು ಕೇಬಲ್‌ ಆಪರೇಟರ್‌ಗಳು ಬಂಡವಾಳ ಮಾಡಿಕೊಳ್ಳುವುದು, ಕ್ರಿಕೆಟ್‌ ಮೊದಲಾದ ಜನಪ್ರಿಯ ಕ್ರೀಡೆಗಳು ಬರುವ ಚಾನಲ್‌ಗಳನ್ನು ಬಂದ್‌ ಮಾಡಿ ನಂತರ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

‘ಕೇಬಲ್‌ ಆಪರೇಟರ್‌ಗಳು ಎಷ್ಟು ಚಾನಲ್‌ಗಳನ್ನು ನೀಡುತ್ತಾರೆ ಎನ್ನುವ ಪ್ಯಾಕೇಜ್‌ ಮೇಲೆ ಶುಲ್ಕ ನಿಗದಿಪಡಿಸಲಾಗುತ್ತಿದೆ. ಇಷ್ಟೇ ಶುಲ್ಕ ವಿಧಿಸಬೇಕು ಎನ್ನುವುದಕ್ಕೆ ಯಾವುದೇ ಸೂಚನೆ ಇಲ್ಲ. ಗ್ರಾಹಕರು ಅವರಿಗೆ ಬೇಕಾದಷ್ಟು ಮನರಂಜನೆ, ಸುದ್ದಿ ಹಾಗೂ ಕ್ರೀಡಾ ಚಾನಲ್‌ಗಳನ್ನು, ಇಂತಿಷ್ಟು ಶುಲ್ಕ ಕೊಟ್ಟು ಪಡೆಯುತ್ತಾರೆ.

ಇದು ಆಪರೇಟರ್‌ಗಳು ಹಾಗೂ ಗ್ರಾಹಕರ ನಡುವೆ ನಡೆಯುವ ವ್ಯವಹಾರ. ಇದರಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ನಮಗೆ ಅಧಿಕಾರವಿಲ್ಲ. ವಂಚನೆಯಾಗಿದ್ದರೆ ಗ್ರಾಹಕರು ‘ಗ್ರಾಹಕರ ಹಿತರಕ್ಷಣೆ ಕಾಯ್ದೆ’ಯಡಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ದಾಖಲಿಸಿ, ಪರಿಹಾರ ಪಡೆಯಬಹುದು’ ಎಂದು ಜಿಲ್ಲಾಡಳಿತದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಹೀಗಿದೆ ಕೇಬಲ್‌ ಶುಲ್ಕ ವಸೂಲಾತಿ ನೀತಿ’
‘ಜಿಲ್ಲೆಯಲ್ಲಿ ಕನಿಷ್ಠ ₹150ರಿಂದ ₹250, ₹300ಕ್ಕೂ ಹೆಚ್ಚು ಕೇಬಲ್‌ ಶುಲ್ಕವನ್ನು ವಿಧಿಸಲಾಗುತ್ತಿದೆ. ‘ಬೇಕಿದ್ದರೆ ಹಾಕಿಸಿಕೊಳ್ಳಿ, ಇಲ್ಲವಾದಲ್ಲಿ ಬಿಡಿ’ ಎನ್ನುವ ಬೆದರಿಕೆಯನ್ನೂ ಕೇಬಲ್‌ ಆಪರೇಟ್‌ಗಳು ಹಾಗೂ ಅಲ್ಲಿನ ಸಿಬ್ಬಂದಿ ಹಾಕುತ್ತಾರೆ.

ಕೇಬಲ್‌ ಸಂಪರ್ಕವಿಲ್ಲದಿದ್ದರೆ ಟಿವಿಯಿಂದ ಏನು ಪ್ರಯೋಜನ ಎಂದುಕೊಳ್ಳುವ ಗ್ರಾಹಕರು ಅನಿವಾರ್ಯವಾಗಿ ಕೇಬಲ್‌ ಆಪರೇಟರ್‌ಗಳು ನೀಡುವ ‘ಪ್ಯಾಕೇಜ್‌’ಗಳನ್ನು ಹಾಕಿಸಿಕೊಳ್ಳುತ್ತಾರೆ; ಕೇಳಿದಷ್ಟು ಶುಲ್ಕ ತೆರುತ್ತಿದ್ದಾರೆ.

ಇನ್ನು ‘ಎಚ್‌ಡಿ’ (ಹೈ ಡೆಫಿನಿಷನ್‌) ಚಾನಲ್‌ಗಳನ್ನು ಪಡೆಯಬೇಕಾದರೆ, ಶುಲ್ಕ ಮತ್ತುಷ್ಟು ಹೆಚ್ಚುತ್ತಲೇ ಹೋಗುತ್ತದೆ! ಇದರಿಂದಾಗಿ ಕೇಬಲ್‌ ಟಿವಿ ಗ್ರಾಹಕರು ದುಬಾರಿ ಶುಲ್ಕ ಕೊಟ್ಟು ಕೇಬಲ್ ಸಂಪರ್ಕ ಪಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ತಲುಪಿದ್ದಾರೆ.

ADVERTISEMENT

ಈ ನಿಟ್ಟಿನಲ್ಲಿ ನಿಗಾ ವಹಿಸಬೇಕಿದ್ದ ಸಂಬಂಧಿಸಿದ ಇಲಾಖೆಗಳು ಹಾಗೂ ಜಿಲ್ಲಾಡಳಿತ, ಜಿಲ್ಲಾಮಟ್ಟದ ಸಮಿತಿಗಳು ಕಣ್ಮುಚ್ಚಿ ಕುಳಿತಿವೆ. ಇದರಿಂದ ವೀಕ್ಷಕರ ಶೋಷಣೆ ಮುಂದುವರಿದಿದೆ. ಅನಗತ್ಯವಾದ ಚಾನಲ್‌ಗಳನ್ನು ನೀಡುವ ಮೂಲಕ ‘ಬಹಳ’ ಎಂದು ತೋರಿಸಿ ಗ್ರಾಹಕರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ. ಪ್ಯಾಕೇಜ್‌ ಹೆಸರಿನಲ್ಲೂ ಗೊಂದಲ ಸೃಷ್ಟಿಸಲಾಗುತ್ತಿದೆ.

ನಿಗದಿಗಿಂತಲೂ ಹೆಚ್ಚಿನ ಸಂಖ್ಯೆಯ ಚಾನಲ್‌ಗಳನ್ನು ನೀಡುತ್ತಿದ್ದೇವೆ. ಹೀಗಾಗಿ, ಶುಲ್ಕ ದುಬಾರಿಯಾಗಿದೆ ಎನ್ನುವ ಮಾತುಗಳನ್ನು ಕೇಬಲ್‌ ಆಪರೇಟರ್‌ಗಳು ಹೇಳುತ್ತಾರೆ’ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

*
₹130ಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎನ್ನುವ ಕುರಿತು ಗೃಹ ಇಲಾಖೆಯಿಂದ ನಿರ್ದೇಶನ ಬಂದಲ್ಲಿ, ಅದನ್ನು ಪಾಲಿಸಲಾಗುವುದು.
-ಸುರೇಶ ಇಟ್ನಾಳ,
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.