ADVERTISEMENT

ಕೈದಿಗಳಿಗೆ ಪೇಂಟಿಂಗ್‌ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 6:20 IST
Last Updated 18 ಮಾರ್ಚ್ 2017, 6:20 IST
ಕೈದಿಗಳಿಗೆ ಪೇಂಟಿಂಗ್‌ ತರಬೇತಿ ಶಿಬಿರ
ಕೈದಿಗಳಿಗೆ ಪೇಂಟಿಂಗ್‌ ತರಬೇತಿ ಶಿಬಿರ   

ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಏಷಿಯನ್‌ ಪೇಂಟ್ಸ್‌ ವತಿಯಿಂದ ಕೈದಿಗಳಿಗೆ ಪೇಂಟಿಂಗ್‌ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಏಷಿಯನ್ ಪೇಂಟ್ಸ್‌ ಕಲರ್ ಅಕಾಡೆಮಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 26 ಕೈದಿಗಳಿಗೆ 12 ದಿನಗಳ ಕಾಲ ತರಬೇತಿ ನೀಡಲಾಯಿತು.

ಮಾಣಪತ್ರಗಳನ್ನು ವಿತರಿಸಲಾಯಿತು. ಕಾರಾಗೃಹದ ಮುಖ್ಯಅಧೀಕ್ಷಕ ಟಿ.ಪಿ ಶೇಷ ಅವರ ಮಾರ್ಗದರ್ಶನದಲ್ಲಿ ತರಬೇತಿ ಆಯೋಜಿಸಲಾಗಿತ್ತು.

ADVERTISEMENT

ಈಚೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಏಷಿಯನ್ ಪೇಂಟ್ಸ್‌ ಕಲರ್ ಅಕಾಡೆಮಿಯ ದಕ್ಷಿಣ ವಿಭಾಗ ಮಾರುಕಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಅಂಕಲಕೋಟೆ ಮಾತನಾಡಿ, ‘ಈ ತರಬೇತಿಯು ಕೈದಿನಗಳ ಮುಂದಿನ ಜೀವನಕ್ಕೆ ಬಹಳ ಉಪಯುಕ್ತವಾಗಲಿದೆ. ಬಿಡುಗಡೆ ಹೊಂದಿದ ನಂತರ ಏಷಿಯನ್ ಪೇಂಟ್ಸ್‌ ನಲ್ಲಿ ಕೆಲಸ ಮಾಡಲು ಇಚ್ಛಿಸಿದರೆ, ಅವರಿಗೆ ಏಷಿಯನ್ ಪೇಂಟ್ಸ್‌ನಲ್ಲಿ ಪೇಂಟರ್ ಅಥವಾ ಗುತ್ತಿಗೆದಾರ ಕೆಲಸ ನೀಡಲಾಗುವುದು’ ಎಂದು ಹೇಳಿದರು.

‘ವಿವಿಧ ಕೇಂದ್ರ ಕಾರಾಗೃಹಗಳಲ್ಲಿನ ನಿವಾಸಿಗಳಿಗೆ ಪೇಂಟಿಂಗ್ ತರಬೇತಿ ಆಯೋಜಿಸಲು ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಕಾರಾಗೃಹಗಳ ಮಹಾ ನಿರೀಕ್ಷಕ ಎಚ್.ಎನ್. ಸತ್ಯ ನಾರಾಯಣ ರಾವ್ ಅನುಮತಿ ನೀಡಿದರು. ಇದರಿಂದ, ಹಲವು ಮಂದಿ ತರಬೇತಿ ಪಡೆಯಲು ಸಾಧ್ಯವಾಯಿತು’ ಎಂದರು.

ಜೈಲರ್ ಎಂ.ಎಂ. ಮರಕಟ್ಟಿ ಮಾತನಾಡಿ, ‘ಈ ತರಬೇತಿಯು ನಿವಾಸಿ ಗಳಲ್ಲಿರುವ ಕೌಶಲದ ಮಟ್ಟವನ್ನು ಸಂಪೂರ್ಣವಾಗಿ ಹೆಚ್ಚಿಸಲು ತುಂಬಾ ಅನುಕೂಲವಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಅಧೀಕ್ಷಕ ಬಿ.ವಿ. ಮೂಲಿಮನಿ, ‘ಈ ತರಬೇತಿಯು ಬಂದಿಗಳಿಗೆ ಬಿಡುಗಡೆ ನಂತರ ಆರ್ಥಿಕವಾಗಿ ಸಬಲರಾಗಲು ಉತ್ತಮ ದಾರಿದೀಪವಾಗಿದೆ. ಬಿಡುಗಡೆ ನಂತರ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಪ್ರಾಮಾಣಿಕತೆಯಿಂದ ಮಾಡಿದ ಯಾವುದೇ ಕೆಲಸ ಯಶಸ್ವಿಯಾಗುತ್ತದೆ’ ಎಂದು ತಿಳಿಸಿದರು.

ಶಿಬಿರಾರ್ಥಿಗಳಾಗಿದ್ದ ಕೆಂಪಣ್ಣ ಬಳೋಬಾಳ ಹಾಗೂ ಗೋವಿಂದರಾಜ್, ಕಾರಾಗೃಹದಿಂದ ಬಿಡುಗಡೆ ಹೊಂದಿದ ನಂತರ ಸ್ವಾವಲಂಬಿ ಜೀವನ ನಡೆಸಲು ಪೇಂಟಿಂಗ್‌ ಅನ್ನು ವೃತ್ತಿಯಾಗಿ ತೆಗೆದು ಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.

ಏಷಿಯನ್ ಪೇಂಟ್ಸ್‌ ಕಲರ್ ಅಕಾಡೆಮಿ ಮಾರುಕಟ್ಟೆ ಅಧಿಕಾರಿ ಗೌರವ್‌, ತಾಂತ್ರಿಕ ತಜ್ಞ ಅನೂಪ್‌ರಾವ್‌ ಹಾಗೂ ಚೇತನ್ ತರಬೇತಿ ನೀಡಿದರು.

ಅಕಾಡೆಮಿಯ ಅಧಿಕಾರಿಗಳನ್ನು ಕಾರಾಗೃಹದಿಂದ ಸನ್ಮಾನಿಸಲಾಯಿತು.

ಜೈಲರ್‌ ಎಸ್.ಎನ್. ನಾಯ್ಕ, ಪ್ರಧಾನ ವೀಕ್ಷಕ ಕೆ.ಆರ್. ಮೊರಬದ ಉಪಸ್ಥಿತರಿದ್ದರು. ಕಾರಾಗೃಹದ ಶಿಕ್ಷಕ ಶಶಿಕಾಂತ ಯಾದಗುಡೆ ಕಾರ್ಯಕ್ರಮ ನಿರೂಪಿಸಿದರು.

*

ಪೇಟಿಂಗ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಈ ತರಬೇತಿ ನೆರವಾಗಲಿದೆ. ಕೈದಿಗಳು ಇದರ ಸದುಪಯೋಗ ಮಾಡಿಕೊಂಡು ಸ್ವಾವಲಂಬಿಗಳಾಗಿ
-ಪ್ರವೀಣ ಅಂಕಲಕೋಟೆ,
ಮಾರುಕಟ್ಟೆ ಕಾರ್ಯ ನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.