ADVERTISEMENT

ಕೌನ್ಸಿಲ್‌ ಗಮನಕ್ಕೆ ತಾರದೆ ವಿಸ್ತರಣೆ!

ಪ್ರತಿಧ್ವನಿಸಿದ ಗುತ್ತಿಗೆ; ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ, ಪ್ರತ್ಯೇಕ ಸಭೆ ನಡೆಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:32 IST
Last Updated 8 ಫೆಬ್ರುವರಿ 2017, 9:32 IST

ಬೆಳಗಾವಿ: ಮಹಾನಗರ ಪಾಲಿಕೆಗೆ ಸೇರಿದ ವಾಣಿಜ್ಯ ಮಳಿಗೆ, ಜಾಗದ ಗುತ್ತಿಗೆ  ಅವಧಿಯನ್ನು ಕೌನ್ಸಿಲ್‌ ಗಮನಕ್ಕೆ ತಾರದೆ ಅಧಿಕಾರಿಗಳೇ ವಿಸ್ತರಣೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನಗರ ಪಾಲಿಕೆಯಲ್ಲಿ ಮೇಯರ್‌ ಸರಿತಾ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು.

ಆಡಳಿತ ಪಕ್ಷದ ಸದಸ್ಯ ಕಿರಣ ಸಾಯಿನಾಕ್ ಈ ವಿಷಯ ಪ್ರಸ್ತಾಪಿಸಿ, ತೆರಿಗೆ ಹೇಗೆ ಸೋರಿಕೆಯಾಗುತ್ತಿದೆ ಎನ್ನುವುದು ಜನರಿಗೆ ಗೊತ್ತಾಗಬೇಕಾ ಗಿದೆ. ಗುತ್ತಿಗೆ ಅವಧಿ ವಿಸ್ತರಿಸಿದ ಕುರಿತು ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು.

ಆಯುಕ್ತ ಶಶಿಧರ ಕುರೇರ, ‘ನಗರದಲ್ಲಿ 119 ಲೀಸ್‌ ಪ್ರಾಪರ್ಟಿಗಳಿವೆ. ಇವುಗಳನ್ನು ಶಿಕ್ಷಣ ಸಂಸ್ಥೆ ಮೊದಲಾದವುಗಳಿಗೆ 5, 10, 30, 20 ಗುಂಟೆ ಲೆಕ್ಕದಲ್ಲಿ 5, 10 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದೆ. ಲೀಸ್‌ ಹಣವನ್ನು 2012ರವರೆಗೆ ಕಟ್ಟಲಾಗಿದೆ. ನಂತರ, ಪಾವತಿಯಾಗಿಲ್ಲ. ಈ ಕುರಿತು ಲೀಸ್‌ ಪಡೆದವರಿಗೆ ನೋಟಿಸ್‌ ಕೊಡಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ 440 ವಾಣಿಜ್ಯ ಆಸ್ತಿಗಳಿದ್ದು, ವಾರ್ಷಿಕ ₹ 1.48 ಕೋಟಿ ಸಂಗ್ರಹವಾಗುತ್ತಿದೆ. ಹಣ ಪಾವತಿಸಿದ ವರು, ಪಾವತಿಸದವರ ಪಟ್ಟಿ ಸಿದ್ಧಪಡಿಸ ಲಾಗಿದೆ. ಕಟ್ಟಡದವರು ಬಾಕಿ ಸಮೇತ ಪಾವತಿಸಬಹುದು. ಈ ಹಣ ವಸೂಲಿಗೆ ತಂಡ ರಚಿಸಲಾಗಿದೆ.

2014ರಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಸಮಿತಿ ರಚನೆ ಮಾಡಿ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿದೆ. ಬಾಕಿ ಪಾವತಿಸಿ, ಗುತ್ತಿಗೆ ಅವಧಿ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಆಗ, ನಾನು ಬುಡಾದಲ್ಲಿ ಆಯುಕ್ತನಾಗಿದ್ದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯ ದೀಪಕ ಜಮಖಂಡಿ, ‘ಸಮಿತಿಯ ಲ್ಲಿದ್ದ ನಮ್ಮನ್ನು ಅಧಿಕಾರಿಗಳು ಕತ್ತಲಲ್ಲಿ ಇಟ್ಟಿದ್ದರು. ಅಧಿಕಾರಿಗಳ ತಪ್ಪಿನಿಂದಾಗಿ ಸದಸ್ಯರ ಮೇಲೆ ಸಂಶಯ ಮೂಡು ವಂತಾಗಿದೆ. ನಾವು ಚರ್ಚಿಸಿದ್ದೇ ಬೇರೆ, ನಿರ್ಣಯವಾಗಿದೆ ಎಂದು ನಮೂದಿಸಿರು ವುದೇ ಬೇರೆಯಾಗಿದೆ. ಗುತ್ತಿಗೆ ಅವಧಿ ಯನ್ನು ವಿಸ್ತರಿಸುವ ನಿರ್ಧಾರವನ್ನು ನಾವು ಮಾಡಿರಲಿಲ್ಲ’ ಎಂದರು.

ನಂತರ, ಆಡಳಿತ ಪಕ್ಷದ ಸದಸ್ಯ ಕಿರಣ ಸಾಯಿನಾಕ್‌ ಸಲಹೆ ಮೇರೆಗೆ, ವಾಣಿಜ್ಯ ಮಳಿಗೆಗಳ ಗುತ್ತಿಗೆ ಹಾಗೂ ಮಾಳಮಾರುತಿ ಮಳಿಗೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲು ನಿರ್ಧರಿ, ಇದೇ 13 ಅಥವಾ 14ರಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಯಿತು.

*
ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದೊಂದು, ಅಧಿಕಾರಿಗಳು ಜಾರಿ ಮಾಡಿರುವುದೊಂದು. ಅಧಿಕಾರಿಗಳ ತಪ್ಪಿನಿಂದ ತೆರಿಗೆ ಸೋರಿಕೆಯಾಗುತ್ತಿದೆ.
-ದೀಪಕ ಜಮಖಂಡಿ
ನಗರಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT