ADVERTISEMENT

ಖಾನಾಪುರ ಹಲಸು: ರುಚಿ ಬಲು ಸೊಗಸು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:01 IST
Last Updated 25 ಏಪ್ರಿಲ್ 2017, 6:01 IST
ಖಾನಾಪುರ ಪಟ್ಟಣದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ಹಣ್ಣುಗಳು..
ಖಾನಾಪುರ ಪಟ್ಟಣದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ಹಣ್ಣುಗಳು..   

ಖಾನಾಪುರ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಬೆಳೆದ ಗಜಗಾತ್ರದ ರುಚಿಯಾದ ಹಲಸಿನ ಹಣ್ಣುಗಳು ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.
ಜಾಂಬೋಟಿ, ಹೆಮ್ಮಡಗಾ, ಮಂತುರ್ಗಾ, ನೇರಸಾ, ಶಿರೋಲಿ, ಗುಂಜಿ, ಲೋಂಡಾ ಮತ್ತಿತರ ಗುಡ್ಡ ಗಾಡು ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಹಲಸಿನ ಹಣ್ಣುಗಳು ಈಗ ಪಕ್ವಗೊಂಡು ಮಾರುಕಟ್ಟೆ ಪ್ರವೇಶಿಸುತ್ತಿವೆ. ಪ್ರಸಕ್ತ ವರ್ಷ ಉಳಿದ ಬೆಳೆಗಳಿಗೆ ಬರದ ಛಾಯೆ ಎದುರಾಗಿದ್ದರೂ ಪಶ್ಚಿಮ ಘಟ್ಟದ ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆದ ಹಲಸು ಮಾತ್ರ ಕಾಯಿಗಳಿಂದ ನಳನಳಿಸುತ್ತಿವೆ. ಪಕ್ವಗೊಂಡ ಹಣ್ಣುಗಳು ವಿಶಿಷ್ಟ ಸುಹಾಸನೆಯಿಂದ ಗ್ರಾಹಕರನ್ನು ಆಕರ್ಷಿಸುತ್ತಿವೆ.

ತಾಲ್ಲೂಕಿನ ವಾತಾವರಣ ಹಲಸಿನ ಮರಗಳು ಬೆಳೆಯಲು ಪೂರಕವಾಗಿದೆ. ಮಳೆ ಇದ್ದರೂ, ಇಲ್ಲದಿದ್ದರೂ ಹಲಸಿನ ಗಿಡಗಳಲ್ಲಿ ಮಾತ್ರ ಯತೇಚ್ಛವಾಗಿ ಕಾಯಿ ಬಿಡುತ್ತಿವೆ. ಸ್ಥಳೀಯವಾಗಿ ಕಾಪಾ ಹಾಗೂ ಬುಳಬುಟ್ಟ ವಿಧದ ತಳಿಗಳಿವೆ. ಕಾಪಾ ತಳಿ ದೊಡ್ಡ ಗಾತ್ರದ ಹಣ್ಣು ಹಾಗೂ ಒಳ್ಳೆಯ ಸುವಾಸನೆ ಹೊಂದಿದೆ/ ಹಲಸಿನ ಗರಿಗಳು ಹಚ್ಚ ಹಳದಿ ಬಣ್ಣದಿಂದ ಕೂಡಿ ತಿನ್ನಲು ರುಚಿಕರವಾಗಿವೆ.

ಬುಳಬುಟ್ಟ ತಳಿ ಚಿಕ್ಕ ಗಾತ್ರದ ಗರಿಗಳನ್ನು ಹೊಂದಿದ್ದು, ಇವುಗಳಿಗೆ ಅಷ್ಟಾಗಿ ಬೇಡಿಕೆಯಿಲ್ಲ. ಹಣ್ಣುಗಳ ಗಾತ್ರ ಹಾಗೂ ಅವು ಹೊರಸೂಸುವ ಸುವಾಸನೆಯ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತಿದೆ. ಹಣ್ಣಿಗೆ ಸರಾಸರಿ ₹ 50ರಿಂದ ₹ 200 ಗೆ ಮಾರಾಟ ಮಾಡಲಾಗುತ್ತಿದೆ.ಮಹಾರಾಷ್ಟ್ರ, ಆಂಧ್ರಕ್ಕೆ ಸಾಗಣೆ
ಖಾನಾಪುರ ಸುತ್ತ ಬೆಳೆಯುವ ಹಲಸಿನ ಹಣ್ಣುಗಳನ್ನು ಸಗಟಾಗಿ ಖರೀದಿಸುವ ವ್ಯಾಪಾರಸ್ಥರು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಿಗೆ ಕಳುಹಿಸುವರು.
ಈ ಎರಡೂ ರಾಜ್ಯಗಳಲ್ಲಿ ಖಾನಾಪುರ ಮತ್ತು ಬೆಳಗಾವಿ ತಾಲ್ಲೂಕಿನ ಹಲಸಿನ ಹಣ್ಣುಗಳಿಗೆ ಉತ್ತಮ ಬೇಡಿಕೆಯಿದೆ. ಉತ್ತಮ ದರವೂ ಸಿಗುವುದು. ಹೀಗಾಗಿ ರೈತರಿಂದ ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವರು.

ADVERTISEMENT

ಹಲಸನ್ನು ಒಂದು ವಾಣಿಜ್ಯ ಬೆಳೆಯನ್ನಾಗಿ ಬೆಳೆದು ಸ್ಥಳೀಯವಾಗಿ ಇದರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ರೈತರು ಮುಂದಾದರೆ ಮುಂದಿನ ದಿನಗಳಲ್ಲಿ ಹಲಸಿಗೆ ಇನ್ನಷ್ಟು ಮಹತ್ವ ಬರಲಿದೆ. ಈ ನಿಟ್ಟಿನಲ್ಲಿ ತಮ್ಮ ಯೋಜನೆ ಹಲಸು ಕೃಷಿ ಕೈಗೊಳ್ಳಲು ತಾಲ್ಲೂಕಿನ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲು ಕಾರ್ಯ ಯೋಜನೆ ರೂಪಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮಾ ಹೇಳುವರು.

ಉಪ ವಲಯ ಅರಣ್ಯಾಧಿಕಾರಿ ಎಂ.ಜಿ ಬೆನಕಟ್ಟಿ, ‘ಹಲಸು ರೈತರ ಪಾಲಿಗೆ ಕಾಮಧೇನುವಾಗಿದ್ದು, ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಬೆಳೆಸಲು ಅರಣ್ಯ ಇಲಾಖೆ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ₹ 2ಕ್ಕೆ ಒಂದರಂತೆ ಸಸಿ ಪೂರೈಸಿ ಸಸಿಗಳನ್ನು ಬೆಳೆಸಲು ತಲಾ ₹ 45 ಪ್ರೋತ್ಸಾಹ ಧನ ನೀಡುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಸನ್ನ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.