ADVERTISEMENT

ಗಡಿ ಸಮಸ್ಯೆಗೆ ವೈಯಕ್ತಿಕ ಗಮನ: ದೇವೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:11 IST
Last Updated 22 ಮೇ 2017, 7:11 IST

ಬೆಳಗಾವಿ: ‘ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಕುರಿತು ವೈಯಕ್ತಿಕವಾಗಿ ಗಮನ ಹರಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ, ಏನು ಮಾಡಲು ಸಾಧ್ಯ ಎನ್ನುವುದನ್ನು ಪರಿಶೀಲಿಸುತ್ತೇನೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಎಂಇಎಸ್‌ ಮುಖಂಡರಿಗೆ ಆಶ್ವಾಸನೆ ನೀಡಿದರು.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಂಬೈಗೆ ತೆರಳಲು ಇಲ್ಲಿಗೆ ಸಮೀಪದ ಸಾಂಬ್ರಾ ವಿಮಾನನಿಲ್ದಾಣಕ್ಕೆ ಶುಕ್ರವಾರ ಸಂಜೆ ಬಂದಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಎಂಇಎಸ್‌ ಮುಖಂಡರು ಭೇಟಿ ಮಾಡಿದ್ದರು.

ಎಂಇಎಸ್‌ ಕೇಂದ್ರ ಘಟಕದ ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಗಡಿ ವಿವಾದವನ್ನು ಇತ್ಯರ್ಥಪಡಿಸಲು ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ಕಾನೂನು ತಜ್ಞರ ಸಭೆಯನ್ನು ಕರೆಯಬೇಕು. ಅವರ ಅಭಿಪ್ರಾಯ ಪಡೆಯಬೇಕು. ಗಡಿ ಪ್ರದೇಶದಲ್ಲಿ ವಾಸವಾಗಿ­ರುವ ಮರಾಠಿಗರ ಪರವಾಗಿ ಮಹಾರಾಷ್ಟ್ರ ಸರ್ಕಾರ ನಿಲ್ಲಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಮಾಳೋಜಿ ಅಷ್ಟೇಕರ ಮಾತನಾಡಿ, ‘ಕೇಂದ್ರ ಸರ್ಕಾರ­ದ ವಕೀಲರು ನಿಷ್ಪಕ್ಷಪಾತವಾಗಿ­ಲ್ಲ. ಕರ್ನಾಟಕದ ಪರ ಒಲವು ಉಳ್ಳವ­ರಾಗಿದ್ದಾರೆ’ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಫಡಣವೀಸ್‌ ಪ್ರತಿಕ್ರಿಯಿಸಿ, ‘ಇವೆಲ್ಲ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿವೆ. ಶೀಘ್ರದಲ್ಲಿಯೇ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ’ ಎಂದು ಹೇಳಿದರು.

ಮಹಾರಾಷ್ಟ್ರದ ಕಂದಾಯ ಸಚಿವ ಹಾಗೂ ಗಡಿ ವಿವಾದ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮಾತ­ನಾಡಿ, ‘ಸಲಹೆ ಹಾಗೂ ಅಭಿಪ್ರಾಯ­ಗಳನ್ನು ಪಡೆಯಲು ಸದ್ಯದಲ್ಲಿಯೇ ಎಂಇಎಸ್‌ ಮುಖಂಡರ ಸಭೆಯನ್ನು ಕರೆಯುತ್ತೇವೆ’ ಎಂದು ತಿಳಿಸಿದರು. ಮಹಾರಾಷ್ಟ್ರ ಸಹಕಾರ ಸಚಿವ ಸುಭಾಷ ದೇಶಮುಖ್‌, ಎಂಇಎಸ್‌ ಮುಖಂಡರಾದ ಮನೋಹರ ಕಿಣೇಕರ, ಎಂ.ಪ್ರಕಾಶ, ವಿಕಾಸ ಕಲಘಟಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.