ADVERTISEMENT

ಗಡಿ ಸಮಸ್ಯೆ ಪ್ರಸ್ತಾಪ: ಎಂಇಎಸ್‌ ನಿರ್ಧಾರ

ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ (ಮೂಕ) ಮೋರ್ಚಾ ಇಂದು; ರ್‍ಯಾಲಿಗಾಗಿ ಮಾರ್ಗ ಬದಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 12:11 IST
Last Updated 16 ಫೆಬ್ರುವರಿ 2017, 12:11 IST
ಬೆಳಗಾವಿ: ಗಡಿ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕೆಂದು ನಗರದಲ್ಲಿ ಗುರುವಾರ ನಡೆಯ ಲಿರುವ ಮರಾಠಾ ಕ್ರಾಂತಿ (ಮೂಕ) ಮೋರ್ಚಾ ದಲ್ಲಿ ಮಂಡಿಸಲು ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕೆ ಕನ್ನಡ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಮೆರವಣಿಗೆಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
 
ಇದಕ್ಕೂ ಮೊದಲು ಬೀದರ್‌, ಧಾರವಾಡ, ವಿಜಯಪುರದಲ್ಲಿ ನಡೆದಿದ್ದ ಮೋರ್ಚಾದಲ್ಲಿ ಗಡಿ ಸಮಸ್ಯೆ ಕುರಿತು ಯಾವುದೇ ಪ್ರಸ್ತಾಪವಿರಲಿಲ್ಲ. ಅಲ್ಲಿನ ನೇತೃತ್ವವನ್ನು ಸಮಾಜದ ಮುಖಂಡರು ವಹಿಸಿದ್ದರು. ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.
 
ಆದರೆ, ಬೆಳಗಾವಿಯಲ್ಲಿ ನಡೆಯು ತ್ತಿರುವ ಮೋರ್ಚಾದ ನೇತೃತ್ವವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಮುಖಂಡರು ವಹಿಸಿ ಕೊಂಡಿದ್ದು, ಗಡಿ ಸಮಸ್ಯೆಯನ್ನು ಬೇಡಿಕೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ. ಇದರಿಂದಾಗಿ ಇತರ ಪಕ್ಷಗಳ ಹಾಗೂ ಪ್ರಗತಿಪರ ಮರಾಠಾ ಮುಖಂಡರಾರೂ ಮೋರ್ಚಾದಲ್ಲಿ ಪಾಲ್ಗೊಳ್ಳುತ್ತಿಲ್ಲ.
 
ಬೇಡಿಕೆ ಮಂಡಿಸುತ್ತೇವೆ: ‘ನಗರದ ಶಹಾಪುರದಲ್ಲಿರುವ ಶಿವಾಜಿ ಉದ್ಯಾನ ದಿಂದ ಕಪಿಲೇಶ್ವರ, ಶನಿ ಮಂದಿರ ರಸ್ತೆ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ ಮಾರುತಿ ಮಂದಿರ, ಹುತಾತ್ಮ ಚೌಕ, ಸಮಾದೇವಿ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತದವರೆಗೆ ಮೋರ್ಚಾ ನಡೆಯಲಿದೆ. ಸಾವಿರಾರು ಜನರು ಭಾಗವಹಿಸಲಿದ್ದಾರೆ. ಎಲ್ಲರೂ ಮೌನ ವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ರೀತಿಯ ಘೋಷಣೆಗಳನ್ನು ಕೂಗುವು ದಿಲ್ಲ’ ಎಂದು ಎಂಇಎಸ್‌ ಪ್ರಧಾನ ಕಾರ್ಯದರ್ಶಿ ಮಾಲೋಜಿ ಅಷ್ಟೇಕರ ಹೇಳಿದರು.
 
‘ಸಂಭಾಜಿ ವೃತ್ತದಲ್ಲಿ ಎಲ್ಲರೂ ಸೇರಿದ ನಂತರ ಐದು ಮಕ್ಕಳು ಪುಟ್ಟ ಭಾಷಣ ಮಾಡಲಿದ್ದಾರೆ. ನಂತರ ಬೇಡಿಕೆಯುಳ್ಳ ಮನವಿ ಪತ್ರವನ್ನು ಜಿಲ್ಲಾಡಳಿತದ ಪ್ರತಿನಿಧಿಗೆ ನೀಡಲಿದ್ದಾರೆ. ಗಡಿ ಸಮಸ್ಯೆಯನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕೆನ್ನುವ ಬೇಡಿಕೆಯೂ ಇದರಲ್ಲಿ ಸೇರಿರುತ್ತದೆ’ ಎಂದು ತಿಳಿಸಿದರು.
 
ಪ್ರಮುಖ ಬೇಡಿಕೆಗಳು: ಮರಾಠಾ ಸಮುದಾಯದವರಿಗೆ ಪ್ರವರ್ಗ 2ಎ ಅಡಿ ಮೀಸಲಾತಿ (ಸದ್ಯಕ್ಕೆ ಕೆಲವು ಮರಾಠಾ ಸಮುದಾಯಗಳಿಗೆ ಪ್ರವರ್ಗ 3ಬಿ ಅಡಿ ಮೀಸಲಾತಿ ಇದೆ) ನೀಡಬೇಕು, ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ಕೋಪರ್ಡಿಯಲ್ಲಿ ಮರಾಠಾ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ನೀಡಬೇಕು, ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗ ತಡೆಯಬೇಕು ಎಂಬ ಬೇಡಿಕೆ ಮಂಡಿಸಲಿದ್ದೇವೆ ಎಂದರು.
 
ಆಕ್ಷೇಪ: ಮೋರ್ಚಾದ ಬೇಡಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಮಾತನಾಡಿ, ‘ಗಡಿ ವಿವಾದವು ಸುಪ್ರೀಂ ಕೋರ್ಟ್‌ ನಲ್ಲಿದೆ. ಈ ವಿಷಯವನ್ನು ಪ್ರಸ್ತಾಪಿಸುವ ಅಗತ್ಯವಿಲ್ಲ. ಇದಕ್ಕೆ ಅವಕಾಶ ನೀಡ ಬಾರದೆಂದು ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿ ದ್ದೇವೆ’ ಎಂದು ತಿಳಿಸಿದರು.
 
ಪೊಲೀಸ್‌ ಬಂದೋಬಸ್ತ್‌: ‘ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೊರಜಿಲ್ಲೆಗಳಿಂದ ಮೀಸಲು ಪಡೆ ಪೊಲೀಸರನ್ನು ಕರೆಸ ಲಾಗಿದೆ. ಮೆರವಣಿಗೆಯು ಮೌನವಾಗಿ ನಡೆಯಲಿದ್ದು, ಯಾವುದೇ ರೀತಿಯ ಘೋಷಣೆಗಳು ಇರುವುದಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ಹೇಳಿದರು. 
 
ಮರಾಠಾ ಮೋರ್ಚಾ; ಮಾರ್ಗ ಬದಲು
ಬೆಳಗಾವಿ:
ನಗರದಲ್ಲಿ ಗುರುವಾರ ನಡೆಯಲಿರುವ ಮರಾಠಾ ಕ್ರಾಂತಿ (ಮೂಕ) ಮೋರ್ಚಾದ ಮಾರ್ಗದಲ್ಲಿ ಮಾರ್ಪಾಟು ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌ ತಿಳಿಸಿದರು.

ಮೆರವಣಿಗೆಯು ಶಹಾಪುರದ ಶಿವಾಜಿ ಉದ್ಯಾನದಿಂದ ಆರಂಭವಾಗಿ, ಕಪಿಲೇಶ್ವರ ರೇಲ್ವೆ ಮೇಲ್ಸೇತುವೆ, ಶನಿ ಮಂದಿರ ರಸ್ತೆ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ ಮಾರುತಿ ಮಂದಿರ, ಹುತಾತ್ಮ ಚೌಕ, ಸಮಾದೇವಿ ಗಲ್ಲಿ ಮೂಲಕ ಬೋಗಾರ್ವೇಸ್‌ ವೃತ್ತದಲ್ಲಿ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.