ADVERTISEMENT

‘ಗುಣಮಟ್ಟದ ಶಿಕ್ಷಣವೇ ಇಲಾಖೆ ಗುರಿ’

​ಪ್ರಜಾವಾಣಿ ವಾರ್ತೆ
Published 26 ಮೇ 2017, 9:32 IST
Last Updated 26 ಮೇ 2017, 9:32 IST

ಬೈಲಹೊಂಗಲ: ‘ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯ ಗುರಿಯಾಗಿದೆ’ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ ಹೇಳಿದರು.

ಪಟ್ಟಣದ ಬಸವೇಶ್ವರ ಆಶ್ರಯ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಡೆದ ಮಕ್ಕಳ ವಿಶೇಷ ದಾಖಲಾತಿ ಆಂದೋ ಲನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘2017-, 18ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಇದೀಗ ಪ್ರಾರಂಭ ವಾಗುತ್ತಿದೆ. 1ರಿಂದ 10ನೇ ತರಗತಿಯ ವರೆಗೆ ಗುಣಮಟ್ಟದ ಶಿಕ್ಷಣವನ್ನು ಅನುಭವಿ ಶಿಕ್ಷಕರಿಂದ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿ ಮಕ್ಕಳಿಗೆ ಇದರ ಪ್ರಯೋಜನ ನೀಡಬೇಕು’ ಎಂದರು.

ADVERTISEMENT

‘ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶೂ, ಸಾಕ್ಸ್‌ಗಳನ್ನು ನೀಡಲಾಗುತ್ತಿದೆ. ಬಿಸಿ ಊಟ, ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಲಾಗಿದೆ. ಎಲ್ಲಾ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ, ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ ನೀಡಿ ವಿವಿಧ ಹಂತಗಳಲ್ಲಿ ಕ್ರೀಡಾ ಕೂಟ ನಡೆಸಿ, ಪ್ರತಿಭಾವಂತರಿಗೆ ಹೆಚ್ಚಿನ ತರಬೇತಿಗೆ ಕಳುಹಿಸಲಾಗುವುದು’ ಎಂದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರಿಂದ ಆರಂಭವಾದ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಉಚಿತ, ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಮಕ್ಕಳು ಘೋಷಣೆ ಕೂಗಿದರು.

ಸರ್ವ ಶಿಕ್ಷಣ ಜಿಲ್ಲಾ ಉಪ ಸಮನ್ವಯ ಅಧಿಕಾರಿ ಮತ್ತಿಕಲ್ಲನ್ನವರ, ಎಸ್.ಡಿ. ಗಂಗಣ್ಣವರ, ಎಸ್.ಬಿ. ಕುಡಸೋಮಣ್ಣ ವರ, ಮುಖ್ಯಾಧ್ಯಾಪಕ ಬಿ.ಬಿ.ಬಸಕ್ರಿ, ತಾಲ್ಲೂಕಿನ ಎಲ್ಲ ಬಿ.ಆರ್.ಸಿ., ಸಿ.ಆರ್.ಪಿ., ಶಿಕ್ಷಣ ಸಂಯೋಜಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.