ADVERTISEMENT

ಗುತ್ತಿಗೆದಾರರ ರಾಜ್ಯಮಟ್ಟದ ಸಮಾವೇಶ ಫೆ. 15,16ರಂದು

ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜನೆ, ಸಂಘದ ಕಾರ್ಯದರ್ಶಿ ಡಿ. ಕೆಂಪಣ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:30 IST
Last Updated 5 ಜನವರಿ 2017, 10:30 IST

ಬೆಳಗಾವಿ: ‘ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ವತಿಯಿಂದ ಫೆ. 15 ಹಾಗೂ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದ್ದು, ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಕೆಂಪಣ್ಣ ಇಲ್ಲಿ ಬುಧವಾರ ತಿಳಿಸಿದರು.

‘ಸಮಾವೇಶದಲ್ಲಿ ರಾಜ್ಯದ ವಿವಿಧೆಡೆ ಯಿಂದ 10 ಸಾವಿರಕ್ಕೂ ಅಧಿಕ ಗುತ್ತಿಗೆ ದಾರರು ಭಾಗವಹಿಸುವರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಸಚಿವರನ್ನು ಆಹ್ವಾನಿಸ ಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ರಾಜ್ಯದಲ್ಲಿ 5–6 ವರ್ಷಗಳಿಂದ ರಾಜ್ಯದಲ್ಲಿ ಕಾಮಗಾರಿ ಕೈಗೊಳ್ಳುವಾಗ ಪ್ಯಾಕೇಜ್‌ ಪದ್ಧತಿ ಅಳವಡಿಸಿ ಟೆಂಡರ್‌ ಕರೆಯಲಾಗುತ್ತಿದೆ. 5–6 ಜಿಲ್ಲೆಗಳಲ್ಲು ಒಟ್ಟುಗೂಡಿಸಿ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಟೆಂಡರ್‌ನಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯುತ್ತಿಲ್ಲ. ಹೊರ ರಾಜ್ಯದವರಿಗೆ ಶೇ 75ರಷ್ಟು ಕಾಮ ಗಾರಿ ಗುತ್ತಿಗೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರ ಅನ್ಯಾಯ ವಾಗುತ್ತಿದೆ’ ಎಂದು ಆರೋಪಿಸಿದರು.

‘ಹಣ ಬಿಡುಗಡೆಯ ವಿಷಯದಲ್ಲೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಲೋಕೋಪಯೋಗಿ ಇಲಾಖೆ ಯೊಂದರಿಂದಲೇ ₹ 7,000 ಕೋಟಿ ಬಾಕಿ ಬರಬೇಕಾಗಿದೆ.ಸರ್ಕಾರದಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು, ಸಚಿವರು ಹೇಳುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ ಯಂತ್ರೋಪಕರಣಗಳು ಹಾಳಾಗ ಬಾರದು ಎನ್ನುವ ಕಾರಣಕ್ಕೆ, ಕಾಮಗಾರಿಗಳನ್ನು ಮುಂದುವರಿಸು ವಂಥ ಅನಿವಾರ್ಯ ಸ್ಥಿತಿ ಗುತ್ತಿಗೆ ದಾರರದಾಗಿದೆ’ ಎಂದು ಹೇಳಿದರು.

ತ್ವರಿತವಾಗಿ ಬಿಲ್‌ ಪಾವತಿಸಿ: ‘ಹೊರ ರಾಜ್ಯದ ಗುತ್ತಿಗೆದಾರರು ಪೂರ್ಣ ಗೊಳಿಸದೆ ಬಿಡುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಹೀಗೆ ಉಪ ಗುತ್ತಿಗೆ ನಿರ್ವಹಿಸುವ ನಮಗೆ ಸಕಾಲದಲ್ಲಿ ಹಣ ಬಿಡುಗಡೆ ಆಗುವು ದಿಲ್ಲ’ ಎಂದು ದೂರಿದರು.

‘ರಾಜ್ಯದ ಗುತ್ತಿಗೆದಾರರ ನೋಂದಣಿ ಯನ್ನು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ಮಾಡದೆ ಏಕಗವಾಕ್ಷಿ ಪದ್ಧತಿ ಮೂಲಕ ಒಂದೇ ಇಲಾಖೆ ಯಲ್ಲಿಯೇ ಮಾಡಬೇಕು.ಕಾಮಗಾರಿ ಪೂರ್ಣಗೊಳಿಸಿದ ತಿಂಗಳೊಳಗೆ ಬಿಲ್‌ ಪಾವತಿ ಮಾಡಬೇಕು. ಶೇ 50ರಷ್ಟು ಹಣವನ್ನು ಮುಂಗಡವಾಗಿ ನೀಡಬೇಕು ಎಂದರು.

60 ದಿನಗಳೊಳಗೆ ಟೆಂಡರ್‌ ಅನು ಮೋದನೆ ನೀಡಿ, ಅರ್ಹ ಗುತ್ತಿಗೆ ದಾರರಿಗೆ ಕಾಮಗಾರಿ ಆದೇಶ ಕೊಡಬೇಕು. 4ನೇ ದರ್ಜೆ ಗುತ್ತಿಗೆ ದಾರರಿಗೆ ₹ 5 ಲಕ್ಷ ಮೌಲ್ಯದ ಕಾಮ ಗಾರಿಯ ಗುತ್ತಿಗೆ ಪಡೆಯಲು, 3ನೇ ದರ್ಜೆ ಗುತ್ತಿಗೆದಾರರಿಗೆ ಇರುವ ಮಿತಿಯನ್ನು ₹ 25 ಲಕ್ಷಕ್ಕೆ ಏರಿಸ ಬೇಕು. 2ನೇ ದರ್ಜೆ ಗುತ್ತಿಗೆದಾರರಿಗೆ ಇರುವ ಮಿತಿಯನ್ನು ₹ 1 ಕೋಟಿಗೆ ಹೆಚ್ಚಿಸ ಬೇಕು’ ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಎಂ.ಎಸ್‌. ಸಂಕಾಗೌಡಶಾನಿ, ಆರ್‌. ಅಂಬಿಕಾಪತಿ, ಖಜಾಂಚಿ ಬಿ.ಎಂ. ನಟರಾಜ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.