ADVERTISEMENT

ಗೇರು ಅಭಿವೃದ್ಧಿ ಯೋಜನೆ ವಿಸ್ತರಣೆ

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅನುಷ್ಠಾನ

ಎಂ.ಮಹೇಶ
Published 7 ಸೆಪ್ಟೆಂಬರ್ 2017, 6:22 IST
Last Updated 7 ಸೆಪ್ಟೆಂಬರ್ 2017, 6:22 IST
ಗೇರು ಅಭಿವೃದ್ಧಿ ಯೋಜನೆ ವಿಸ್ತರಣೆ
ಗೇರು ಅಭಿವೃದ್ಧಿ ಯೋಜನೆ ವಿಸ್ತರಣೆ   

ಬೆಳಗಾವಿ: ತೋಟಗಾರಿಕೆ ಇಲಾಖೆ ಯಿಂದ ಈ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಗೇರು ಅಭಿವೃದ್ಧಿ ಯೋಜನೆಯನ್ನು ವಿಭಾಗದ ಏಳು ಜಿಲ್ಲೆಗಳ 560 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ರೈತರಿಗೆ ಸಹಾಯ ಧನವೂ ದೊರೆಯುತ್ತದೆ. ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳುವುದಕ್ಕೂ ಆರ್ಥಿಕ ನೆರವನ್ನು ಇಲಾಖೆ ಒದಗಿಸುತ್ತದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಮತ್ತು ಸಣ್ಣ ಪ್ರಮಾಣದ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಮೀನು ಅಭಿವೃದ್ಧಿ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ.

ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಬೈಲಹೊಂಗಲ (50.68 ಹೆಕ್ಟೇರ್‌), ಬೆಳಗಾವಿ (49), ಹುಕ್ಕೇರಿ (21) ಮತ್ತು ಖಾನಾಪುರ (50 ಹೆಕ್ಟೇರ್‌) ತಾಲ್ಲೂಕಿ ನಲ್ಲಿ 170 ಹೆಕ್ಟೇರ್‌ನಲ್ಲಿ ಯೋಜನೆ ಜಾರಿಗೊಳಿಸುವ ಗುರಿ ಹೊಂದಲಾಗಿದೆ.

ADVERTISEMENT

‘ಹಿಂದೆ ರಾಷ್ಟ್ರೀಯ ತೋಟಗಾರಿಕೆ ಅಭಿಯಾನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಬಜೆಟ್‌ನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ, ಹಳೆ ಗೇರು ತೋಟ ಪುನಶ್ಚೇತಕಕ್ಕೆ ಕ್ರಮ ವಹಿಸಲಾಗಿದೆ. ವಿಸ್ತರಣೆಗೂ ಆದ್ಯತೆ ಕೊಡಲಾಗಿದೆ. ಸತತ ಬರಗಾಲ ಇರುವುದರಿಂದ, ಇತರ ಬೆಳೆಗಳಲ್ಲಿ ಉತ್ಪಾದಕತೆ ಕಡಿಮೆ ಯಾಗುತ್ತಿದೆ. ಹೀಗಾಗಿ, ರೈತರಿಗೆ ಆದಾಯ ತಂದುಕೊಡಬಲ್ಲ ಗೇರು ಕೃಷಿಯಂತಹ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ತೋಟಗಾರಿಕೆ ಅಧಿಕಾರಿ ಶಿವಾನಂದ ಮಾಳಶೆಟ್ಟಿ ಮಾಹಿತಿ ನೀಡಿದರು.

ಸಿಗುವ ಸೌಲಭ್ಯಗಳು: ‘ಜಿಲ್ಲೆಗೆ ₹ 53.14 ಲಕ್ಷ ಅನುದಾನ ದೊರೆತಿದೆ. ರೈತರಿಗೆ ಬೆಳೆ ನಿರ್ವಹಣೆಯ ಮಾಹಿತಿ, ಸಾವ ಯವ ಗೊಬ್ಬರ, ಬೇವಿನ ಇಂಡಿ, ಜೈವಿಕ ಗೊಬ್ಬರ, ರಸಾಯನಿಕ ಗೊಬ್ಬರ ಬಳಕೆಯ ಸಲಹೆ ಕೊಡಲಾಗುವುದು. ಸಾಮಾನ್ಯವರ್ಗದ ರೈತರಿಗೆ ಹೆಕ್ಟೇರ್‌ಗೆ ಶೇ 50ರಷ್ಟು ಅಂದರೆ ₹ 26,050, ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತ ರಿಗೆ ಹೆಕ್ಟೇರ್‌ಗೆ ಶೇ 90ರಷ್ಟು ಅಂದರೆ ₹ 46,890 ಸಹಾಯಧನ ದೊರೆಯಲಿದೆ.

ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಂಡರೆ ಘಟಕ ವೆಚ್ಚದಲ್ಲಿ ಪ್ರತ್ಯೇಕವಾಗಿ ಶೇ 90ರಷ್ಟು ಸಹಾಯಧನ ಪಡೆಯುವು ದಕ್ಕೂ ಅವಕಾಶವಿದೆ. ಹನಿ ನೀರಾವರಿ ಯಿಂದ ಹೆಚ್ಚಿನ ಪ್ರಯೋಜನ ಪಡೆಯ ಬಹುದಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಶಿವಾನಂದ ಮಾಳಶೆಟ್ಟಿ ತಿಳಿಸಿದರು.

‘ಜಮೀನು ಅಭಿವೃದ್ಧಿ, ಗುಂಡಿ ತೋಡುವುದಕ್ಕೆ ಉದ್ಯೋಗ ಖಾತ್ರಿಯಡಿ ಕೆಲಸ ಮಾಡಬಹುದು. ಜಮೀನಿನ ಮಾಲೀಕರೆ ಕೆಲಸ ಮಾಡಿದರೆ ಅವರಿಗೆ ಕೂಲಿ ಸಿಗುತ್ತದೆ ಅಥವಾ ಉದ್ಯೋಗ ಚೀಟಿ ಇರುವ ಕೂಲಿ ಕಾರ್ಮಿಕರಿಂದಲೂ ಮಾಡಿಸಬಹುದು. ಕೂಲಿಯು ನೇರವಾಗಿ ಖಾತೆಗೆ ಸಂದಾಯವಾಗುತ್ತದೆ. ಇದರಿಂದ ಕೃಷಿಕರಿಗೆ ಜಮೀನು ಅಭಿವೃದ್ಧಿಪಡಿಸಿದಂತೆಯೂ ಆಗುತ್ತದೆ ಹಾಗೂ ಒಂದಷ್ಟು ಮಂದಿಗೆ ಉದ್ಯೋಗವೂ ಸಿಗುತ್ತದೆ. ಇದು ಪರಿಶಿಷ್ಟ ಜಾತಿ, ಪಂಗಡದ ಹಾಗೂ ಸಣ್ಣ ರೈತರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸರ್ಕಾರದ ಮಾರ್ಗಸೂಚಿ ಇದೆ’ ಎಂದು ತಿಳಿಸಿದರು.

ಹೆಕ್ಟೇರ್‌ಗೆ 400 ಸಸಿ: ಸಸಿಗಳನ್ನು ನೆಟ್ಟು ಪೋಷಿಸಿದ ನಂತರ ಇಳುವರಿ ಬರುವು ದಕ್ಕೆ 3ರಿಂದ 4 ವರ್ಷ ಬೇಕು. ಹೀಗಾಗಿ, ಸಣ್ಣ ರೈತರು ಜಮೀನಿನ ಬದುಗಳಲ್ಲಿ ಸಸಿಗಳನ್ನು ನೆಟ್ಟುಕೊಳ್ಳಬಹುದು. ಕ್ಷೇತ್ರವನ್ನು (ಬ್ಲಾಕ್‌) ಮಾಡುವುದಕ್ಕೂ ಅವಕಾಶವಿದೆ.

ಕ್ಷೇತ್ರ ಕೃಷಿಯಿಂದ ಹೆಚ್ಚಿನ ಅನುಕೂಲವಿದೆ. ಜಿಲ್ಲೆಯ ಹವಾಮಾನ, ಮಣ್ಣಿನ ಫಲವತ್ತತೆ ಆಧರಿಸಿ ‘ವೆಂಗುರ್ಲಾ 4’ ಹಾಗೂ ‘ವೆಂಗುರ್ಲಾ 7’ ತಳಿಗಳನ್ನು ನೆಡುವಂತೆ ಶಿಫಾರಸು ಮಾಡಲಾಗಿದೆ. ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಕ್ಟೇರ್‌ಗೆ 400 ಸಸಿಗಳನ್ನು ನೆಡಬಹುದು. ಜಿಲ್ಲೆಯಲ್ಲಿ ಈವರೆಗೆ 3,000 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಇದೆ.

ಗಿಡವೊಂದರಲ್ಲಿ ಸರಾಸರಿ 5ರಿಂದ 6 ಕೆ.ಜಿ. ಗೋಡಂಬಿ ಪಡೆಯಬಹುದು. ಹೆಕ್ಟೇರ್‌ಗೆ 15 ಕ್ವಿಂಟಲ್‌ ಗೇರು ಇಳುವರಿ ಸಾಧ್ಯ. ಕೆ.ಜಿ. ಗೋಡಂಬಿಗೆ ₹400 ದರವಿದೆ.

*
ಯೋಜನೆಗೆ ಆಯ್ಕೆಯಾದ ಫಲಾನುಭವಿ ರೈತರಿಗೆ ಗೇರು ಕೃಷಿಯ ಕುರಿತು ತರಬೇತಿ, ಮಾರ್ಗ ದರ್ಶನ ನೀಡಲಾಗುವುದು. ಕ್ಷೇತ್ರೋತ್ಸವವನ್ನೂ ನಡೆಸಲಾಗುವುದು.
–ಶಿವಾನಂದ ಮಾಳಶೆಟ್ಟಿ,
ತೋಟಗಾರಿಕಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.