ADVERTISEMENT

ಗೋವು ರಕ್ಷಣೆಗೆ ಕಾನೂನು ಹೋರಾಟ ಅಗತ್ಯ

ಜನಜಾಗೃತಿ ಜಾಥಾ * ಗೋ ಪರಿವಾರ ರಚನೆಗೆ ಸಲಹೆ * ಗೋಮಾಳ, ಕೆರೆ ಕಟ್ಟೆ ಉಳಿವಿಗಾಗಿ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:35 IST
Last Updated 9 ಜನವರಿ 2017, 8:35 IST
ಹುಕ್ಕೇರಿ: ಗೋವುಗಳ ರಕ್ಷಣೆಗೆ ಗೋ ಪ್ರೇಮಿಗಳ ಒಕ್ಕೂಟದ ಪರಿವಾರ ರಚನೆ, ಗೋ ಉದ್ಯಮ ಪ್ರಾರಂಭ, ಗೋ ರಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ವಿರುದ್ಧ ಸರ್ಕಾರ ಕೇಸು ದಾಖಲಿಸಿದಾಗ ವಕೀಲರು ಸಂಘಟಿತರಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ  ಹೇಳಿದರು.
 
ಅವರು ಶನಿವಾರ ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ರೈತ ಹಿತರಕ್ಷಣಾ ಸಮಿತಿಯವರು ಆಯೋಜಿಸಿದ್ದ ರಾಘವೇಶ್ವರ ಶ್ರೀಗಳು ಮತ್ತು ರೈತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 
 
ಗ್ರಾಮೀಣ ಪ್ರದೇಶಗಳಲ್ಲಿ ಗೋವು ಜನ್ಯ ಉತ್ಪನ್ನಗಳ ಸಂಗ್ರಹಣಾ ಕೇಂದ್ರ, ಮಾರಾಟ ಕೇಂದ್ರ, ಗೋಮಾಳ ಮತ್ತು ಕೆರೆ ಕಟ್ಟೆಗಳ ಕಬಳಿಕೆ ಉಳಿಸುವ ಆಂದೋಲನದ ಮೂಲಕ ಗೋವು ಸಂತತಿ ಉಳಿಸಿ ಬೆಳೆಸಲು ಸಾಧ್ಯ ಎಂದು ಸಲಹೆ ನೀಡಿದರು.
 
ಗೋವಿನ ಹಾಲು, ತುಪ್ಪ, ಮೂತ್ರ ಮೊದಲಾದವುಗಳು ತುಂಬಾ ಬೆಲೆ ಬಾಳುತ್ತವೆ. ಆ ಕುರಿತು ಗೋ ಪಾಲನೆ ಮಾಡುವವರಿಗೆ ತಿಳಿಸಿ ಕೊಡಲು ಸೂಚಿಸಿದರು.
ಹುಲ್ಲೋಳಿ ಹಟ್ಟಿ ಶಿವಾನಂದ ಮಠದ ಕೈವಲ್ಯಾನಂದ ಸ್ವಾಮೀಜಿ ಮಾತನಾಡಿ ಮಾರುಕಟ್ಟೆಗಳಿಂದ ರೈತರ ನಿರಂತರ ಶೋಷಣೆ ಇದೆ. ಅವುಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿವೆ. ಸಂಘಟಿತರಾಗಿ ಸಾವಯವ ಕೃಷಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಹುಕ್ಕೇರಿ ತಾಲ್ಲೂಕಿನಲ್ಲಿ ರೈತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
 
ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಮಾತನಾಡಿ ತಾಲ್ಲೂಕಿನಲ್ಲಿ ಗೋ ಬ್ಯಾಂಕ್ ಸ್ಥಾಪನೆಗೆ ಶ್ರಮಿಸುವುದಾಗಿ ತಿಳಿಸಿದರು.
 
ಸನ್ಮಾನ: ಇದೇ ಸಂದರ್ಭದಲ್ಲಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ರಾಘವೇಶ್ವರ ಶ್ರೀಗಳನ್ನು ಸತ್ಕರಿಸಲಾಯಿತು.
 
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿಜಯ ರವದಿ, ಅಖಿಲ ಭಾರತ ವೀರಶೈವ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಚಂಬಣ್ಣ ತಾರಳಿ, ನಿವೃತ್ತ ಶಿಕ್ಷಕ ಎಸ್.ಐ. ಸಂಬಾಳ, ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಗಂಗನ್ನವರ, ತಮ್ಮಣ್ಣಗೌಡ ಪಾಟೀಲ,ವಕೀಲ ಸಂಘದ ಅಧ್ಯಕ್ಷ ಸುರೇಶ ಮಾಳಾಜ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
 
ಸುಭಾಸ ನಾಯಿಕ ಸ್ವಾಗತಿಸಿದರು. ವಕೀಲ ಕೆ.ಪಿ. ಶಿರಗಾಂವಕರ ನಿರೂಪಿಸಿ ವಂದಿಸಿದರು. 
 
‘ಭಾರತೀಯ ಸಂಸ್ಕೃತಿಯ ಕೇಂದ್ರ  ಗೋವು’
ಚಿಕ್ಕೋಡಿ: ಭಾರತೀಯ ಸಂಸ್ಕೃತಿಯ ಕೇಂದ್ರವಾದ ಗೋವುಗಳು ಸಹಜವಾಗಿ ಹುಟ್ಟಿ ಬಾಳಬೇಕು. ಗೋ ರಕ್ತ ಮುಕ್ತ ಭಾರತವಾಗಬೇಕು’ ಎಂದು ಶ್ರೀಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. 
 
ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಯೋಜಿಸಿದ್ದ ಗೋಕರ್ಣದ ರಾಮಚಂದ್ರಾಪುರ ಮಠದ ಪರಿಕಲ್ಪನೆಯ ಮಂಗಲ ಗೋ ಯಾತ್ರೆಯ ಶೋಭಾಯಾತ್ರೆ ಹಾಗೂ ಸುರಭಿ ಸಂತ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 
 
ಶಿವ ಮತ್ತು ಶೈವರನ್ನು ಜೋಡಿಸುವ ನಂದಿಕುಲವನ್ನೇ ನಾಶವಾಗಿಸಲು ಹೊರಟಿರುವುದು ಸರಿಯಲ್ಲ. ಭವ್ಯ ಭಾರತೀಯ ಪರಂಪರೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಗೋಮಾತೆ ಸಹಜವಾಗಿ ಹುಟ್ಟಿ, ಬಾಳಿ, ಸಹಜವಾಗಿ ಸಾಯಬೇಕೆ ಹೊರತು ಹತ್ಯೆಯಾಗಬಾರದು ಎಂಬುದರ ಕುರಿತು ಜಾಗೃತಿ ಮೂಡಿಸುವುದೇ ಗೋ ಯಾತ್ರೆಯ ಉದ್ದೇಶವಾಗಿದ ಎಂದು ಅವರು ಹೇಳಿದರು.
 
ಚಿಂಚಣಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ಹುಲ್ಲೋಳ್ಳಿಹಟ್ಟಿಯ ಕೈವಲ್ಯಾನಂದ ಸ್ವಾಮೀಜಿ,  ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಸದಲಗಾದ ಡಾ. ಶ್ರದ್ಧಾನಂದ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು. 
 
ಯಕ್ಸಂಬಾದ ಮಹಾಲಿಂಗ ಸ್ವಾಮೀಜಿ, ಕಲ್ಲಪ್ಪ ಜಾಧವ, ರವೀಂದ್ರ ಹಂಪಣ್ಣವರ, ಜಯಾನಂದ ಜಾಧವ, ಎಸ್‌.ಎನ್.ಸಪ್ತಸಾಗರೆ, ಅಣ್ಣಾಸಾಹೇಬ ಬಾಕಳೆ, ಬಸವರಾಜ ಕಲ್ಯಾಣಿ, ಜಗದೀಶ ಪಾಂಗಮ, ದಯಾನಂದ ಮಾಳಿ, ಸುಭಾಷ ಕಟ್ಟಿಕರ, ಕೃಷ್ಣಾ ಮಾಳಿ, ರಾಮಕೃಷ್ಣ ಬಾಕಳೆ, ಸದಾನಂದ ಹಿರೇಮಠ, ಮಹೇಶ ಬಾಕಳೆ, ಶಿವಾಜಿ ಗೋಟುರೆ, ಚಿದಾನಂದ ಮೋಪಗಾರ, ಉದಯ ರಾಯಜಾಧವ ಉಪಸ್ಥಿತರಿದ್ದರು.  
 
ಶೋಭಾಯಾತ್ರೆಯು ಬಸವವೃತ್ತದಿಂದ ಚನ್ನಮ್ಮಾ ವೃತ್ತದ ಮೂಲಕ ಶ್ರೀ ಬೀರೇಶ್ವರ ಮಂದಿರದವರೆಗೆ ನಡೆಯಿತು. ಶೋಭಾಯಾತ್ರೆಯಲ್ಲಿ ಗೋಕೇಂದ್ರಿತ ಬದುಕಿನ ಕಲಾಪ್ರದರ್ಶನಗಳು, ಗವ್ಯಾಧಾರಿತ ಪಾಕೋತ್ಸವ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. 
 
***
ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿ ಸಾಧಿಸದ ಹೊರತು ಅವರ ಮೇಲೆ ನಡೆಯುವ ಶೋಷಣೆಯನ್ನು ತಡೆಯಲು ಸಾಧ್ಯವಿಲ್ಲ.
-ಕೈವಲ್ಯಾನಂದ ಸ್ವಾಮೀಜಿ
ಹೊಲ್ಲೋಳಿ ಹಟ್ಟಿ ಶಿವಾನಂದ ಮಠಾಧೀಶ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.