ADVERTISEMENT

ಗ್ರಾಮೀಣ ಪ್ರತಿಭೆಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:56 IST
Last Updated 25 ಏಪ್ರಿಲ್ 2017, 5:56 IST

ಬೆಳಗಾವಿ: ರಾಮದುರ್ಗ ತಾಲ್ಲೂಕು ಸುರೇಬಾನ ಮನಿಹಾಳದ ಮಂಜುನಾಥ ಡೊಂಬರ 5ನೇ ರ್‌್ಯಾಂಕ್‌ ಗಳಿಸಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಸವದತ್ತಿ ತಾಲ್ಲೂಕು ತೆಗ್ಗಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗಲೇ ಬಿ.ಎ. ಬಿ.ಇಡಿ, ಎಂ.ಎ. ಎಂ.ಇಡಿ ಪದವಿ ಪಡೆದಿದ್ದಾರೆ. ಸವದತ್ತಿ ತಾಲ್ಲೂಕು ಕರಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.

ಈ ನಡುವೆ, ಪಿ.ಯು. ಉಪನ್ಯಾಸಕರಾಗಿಯೂ ಆಯ್ಕೆಯಾಗಿ, ಸದ್ಯ ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದಾರೆ. ಬಡ ನೇಕಾರ ಕುಟುಂಬದ ಹಿನ್ನೆಲೆಯಿಂದ ಬಂದ ಮಂಜುನಾಥ್‌, ವಿದ್ಯಾರ್ಥಿದಿಸೆಯಿಂದಲೇ ರ್‌್ಯಾಂಕ್‌ ವಿಜೇತರು. ಎರಡು ಸಲ ಕೆಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಮೂರನೇ ಬಾರಿಗೆ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲ್ಲೂಕು ಯಬರಟ್ಟಿ ಗ್ರಾಮದ ಈಶ್ವರ ಅ. ಉಳ್ಳಾಗಡ್ಡಿ 7ನೇ ರ್‌್ಯಾಂಕ್‌ ಪಡೆದಿದ್ದಾರೆ.ತೆಗ್ಗಿಹಾಳ ಗ್ರಾಮದ ಯಲ್ಲಪ್ಪ ಸಿಂಗನ್ನವರ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಗ್ರಾಮದ ಶೆಟ್ಟಪ್ಪ–ಮರೆವ್ವ ದಂಪತಿಯ ಪುತ್ರನಾದ ಯಲ್ಲಪ್ಪ, ಪ್ರಾಥಮಿಕ ಶಿಕ್ಷಣವನ್ನು ತೆಗ್ಗಿಹಾಳ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದಾರೆ. ಬೆಟಸೂರು ನಂತರ, ಮುನವಳ್ಳಿಯ ಎಸ್.ಪಿ.ಜೆ.ಜಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದರು. ಬೆಳಗಾವಿಯ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಟಿ.ಸಿ.ಎಚ್ ಮುಗಿಸಿದ್ದಾರೆ.

ADVERTISEMENT

ಜಿಲ್ಲೆಯ ಬೆನಕಟ್ಟಿ ನಿವಾಸಿ, ಶಿಕ್ಷಕ ಮಲ್ಲಿಕಾರ್ಜುನ ನಾಮದೇವ ಹೆಗ್ಗನ್ನವರ ಅವರು ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 34ನೇ ರ್‌್ಯಾಂಕ್‌ ಗಳಿಸಿದ್ದಾರೆ. ನೇಕಾರಿಕೆ ಕುಟುಂಬದಲ್ಲಿ ಬೆಳೆದ ಮಲ್ಲಿಕಾರ್ಜುನ ಅವರು ಮುನವಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.