ADVERTISEMENT

ಜನರನ್ನು ರಂಜಿಸಿದ ಆಳ್ವಾಸ್‌ ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 6:49 IST
Last Updated 26 ಡಿಸೆಂಬರ್ 2017, 6:49 IST
ಬೈಲಹೊಂಗಲದಲ್ಲಿ ಭಾನುವಾರ ನಡೆದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಡಾ.ಮೋಹನ ಆಳ್ವಾ ಹಾಗೂ ಶಾಸಕ ಡಾ.ವಿಶ್ವನಾಥ ಪಾಟೀಲ ಅವರನ್ನು ಜನಪದ ಕಲಾವಿದರು ಸತ್ಕರಿಸಿದರು
ಬೈಲಹೊಂಗಲದಲ್ಲಿ ಭಾನುವಾರ ನಡೆದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಡಾ.ಮೋಹನ ಆಳ್ವಾ ಹಾಗೂ ಶಾಸಕ ಡಾ.ವಿಶ್ವನಾಥ ಪಾಟೀಲ ಅವರನ್ನು ಜನಪದ ಕಲಾವಿದರು ಸತ್ಕರಿಸಿದರು   

ಬೈಲಹೊಂಗಲ: ಚುಮುಚುಮು ಚಳಿಯಲ್ಲೂ ನೃತ್ಯ ವೈಭವ ಕಣ್ತುಂಬಿಕೊಂಡ ಸಾವಿರಾರು ಮಂದಿ, ಅಭಿಮಾನದ ಚಪ್ಪಾಳೆ, ಸಿಳ್ಳೆ ಮೂಲಕ ‘ಸಾಂಸ್ಕೃತಿಕ ವೈಭವದ’ ಕಲಾ ರಸದೌತಣವನ್ನು ಆಸ್ವಾದಿಸಿದರು.

ಪಟ್ಟಣದ ಪುರಸಭೆ ಶೂರ ಸಂಗೊಳ್ಳಿರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಶಾಸಕ ಡಾ.ವಿಶ್ವನಾಥ ಪಾಟೀಲ ಗೆಳೆಯರ ಬಳಗ ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮ, ಇಲ್ಲಿನ ಕಲಾಪ್ರಿಯರನ್ನು ರಂಜಿಸಿತು.

350ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂಡಗಳು ದೇಶದ ವಿವಿಧ ಕಲೆ ಆಧರಿಸಿದ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದವು. ಜನ ಮನಸೂರೆಗೊಳ್ಳುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

ADVERTISEMENT

ಕೇರಳದ ಶಾಸ್ತ್ರೀಯ ಮೋಹಿನಿ ಅಟ್ಟಂ, ಬುಡಗುತಿಟ್ಟು ಯಕ್ಷಪ್ರಯೋಗ, ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಆಂಧ್ರದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್‌, ಮಲ್ಲಕಂಬ, ಭರತನಾಟ್ಯ, ಕಥಕ್‌, ತೆಂಕುತಿಟ್ಟು ಯಕ್ಷಗಾನ, ಮಹಾರಾಷ್ಟ್ರದ ಲಾವಣಿ ನೃತ್ಯಗಳು, ವಂದೇಮಾತರಂ ರೂಪಕ ಗಳು ಪ್ರೇಕ್ಷಕರನ್ನು ಸಾಂಸ್ಕೃತಿಕ ವೈವಿಧ್ಯದ ಲೋಕಕ್ಕೆ ಕರೆದೊಯ್ದವು. ಮಣಿಪುರಿ ಸ್ಟಿಕ್ ಡ್ಯಾನ್ಸ್‌ನಲ್ಲಿ ವಿದ್ಯಾರ್ಥಿ ಗಳು ಮಾಡಿದ ಕಸರತ್ತು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ವಿವಿಧ ರಾಜ್ಯಗಳ ಕಲಾ ಶ್ರೀಮಂತಿಕೆಯನ್ನು ವೇದಿಕೆಯಲ್ಲಿ ಕಟ್ಟಿಕೊಡುವ ಕಾರ್ಯ ವನ್ನು ವಿದ್ಯಾರ್ಥಿಗಳು ಮಾಡಿದರು.

ಮನಸ್ಸು ಜೋಡಿಸುವ ಕೆಲಸವಾಗಲಿ: ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ, ‘ಪೂರ್ವಜರು ಒಳ್ಳೆಯ ಸಂಸ್ಕಾರ, ಸಂಸ್ಕೃತಿಯಿಂದ ನಾಡನ್ನು ಕಟ್ಟಿದ್ದಾರೆ. ಇಂತಹ ಭವ್ಯ ಪರಂಪರೆ ಉಳಿಸಿ, ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಧರ್ಮ, ಜಾತಿ, ಪಂಗಡಗಳವರು, ರಾಜಕೀಯ ಮುಖಂಡರು, ಮಾಧ್ಯಮ ನಮ್ಮನ್ನು ಒಟ್ಟು ಮಾಡುವ ಕೆಲಸ ಮಾಡದೇ ಕಂದಕ ಸೃಷ್ಟಿಸುತ್ತಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

ಕಣ್ಮರೆಯಾಗುತ್ತಿರುವ ಕಲೆಗಳು: ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ, ‘ಈ ಭಾಗದಲ್ಲಿ ಜನಪದ ಕಲೆಗಳಿಗೆ ಬಹಳ ಮೊದಲಿನಿಂದಲೂ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆಗಬೇಕು. ರಾಜಕೀಯ ಮುಖಂಡರ ಹಾಗೂ ಜನರ ಇಚ್ಛಾಶಕ್ತಿ ಕೊರತೆಯಿಂದ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ’ ಎಂದು ಹೇಳಿದರು.

ಜನಪದ ಕಲಾವಿದರು, ಹೋಟೆಲ್ ಮಾಲೀಕರ ಸಂಘ, ಕನ್ನಡ ಜನಪದ ಪರಿಷತ್ತಿನಿಂದ ಮೋಹನ ಆಳ್ವ ಅವರನ್ನು ಸತ್ಕರಿಸಲಾಯಿತು. ಮೂರುಸಾವಿರ ಮಠದ ಪ್ರಭು ನೀಲ ಕಂಠ ಸ್ವಾಮೀಜಿ, ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ವೇದಮೂರ್ತಿ  ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು

ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಮುಖಂಡರಾದ ಶ್ರೀಶೈಲ ಬೊಳನ್ನವರ, ಮಹೇಶ ಹರಕುಣಿ, ಪ್ರಮೋದಕುಮಾರ, ಸಿ.ಕೆ. ಮೆಕ್ಕೇದ, ಬಸವರಾಜ ಬಾಳೇಕುಂದರಗಿ, ಚನ್ನಬಸಪ್ಪ ಹೊಸಮನಿ, ಮಲ್ಲಪ್ಪ ಮುರಗೋಡ, ಅಣ್ಣಪ್ಪ ಕಂಠಿ, ಎಂ.ವೈ. ಸೋಮಣ್ಣವರ, ಕಾಶೀನಾಥ ಬಿರಾದಾರ, ಮೋಹನ ಪಾಟೀಲ, ಬಾಬುಸಾಬ ಸುತಗಟ್ಟಿ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ನಾಗರಾಜ ಶೆಟ್ಟಿ, ಹೊಟೇಲ್ ಉದ್ಯಮಿ ವಿಠ್ಠಲ್ ಹೆಗ್ಡೆ ಇದ್ದರು. ಉಪನ್ಯಾಸಕ  ಉದಯ ಮಂಜುನಾಥ್ ಅಡೇಮನೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.