ADVERTISEMENT

‘ಜನರಿಗೆ ಧರ್ಮ ಸಂಸ್ಕಾರ ನೀಡಿ’

ಅರಳಿಕಟ್ಟಿ ತಪೋವನದ ನಿರಂಜನ ಚರಮೂರ್ತಿ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:38 IST
Last Updated 23 ಮಾರ್ಚ್ 2017, 9:38 IST

ರಾಮದುರ್ಗ: ತಾಲ್ಲೂಕಿನ ಹೊಸಕೇರಿ ಸಮೀಪದ ಕಾಕನೂರ ಅರಳಿಕಟ್ಟಿ ತಪೋವನದ ಶ್ರೀ ರಾಜಗುರು ನಿರಂಜನ ಚರಮೂರ್ತಿ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಭಕ್ತಾಧಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಅರಳಿಕಟ್ಟಿ ಮಠದ ಪಟ್ಟಾಧಿಕಾರಿಯಾಗಿ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೊರಣೇಶ್ವರ ಮಠದ ಮುರಘೇಂದ್ರ ಶಿವಯೋಗಿಗಳ ನೇತೃತ್ವದಲ್ಲಿ ನೇಮಕ ಮಾಡಲಾಯಿತು.

ಮುರಘೇಂದ್ರ ಕೊರಣೇಶ್ವರ ಸ್ವಾಮೀಜಿ ಮಾತನಾಡಿ, ಆಸ್ತಿ ಅಂತಸ್ತಿಗಾಗಿ ಧರ್ಮ ದೀಕ್ಷೆ ಪಡೆಯುವುದು ಬೇಡ, ಧರ್ಮಗುರುವಾದವನು ಧರ್ಮ ಜಾಗೃತಿ ಮೂಡಿಸಿ, ಭಕ್ತಾದಿಗಳ ಮನಗೆಲ್ಲುವ ಕೆಲಸ ಮಾಡಬೇಕು. ಭಕ್ತರನ್ನು ಸುಸಂಸ್ಕೃತರನ್ನಾಗಿ ಮಾಡಿದಲ್ಲಿ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ.

ಆ ನಿಟ್ಟಿನಲ್ಲಿ ಫಲಹಾರ ಶಿವಯೋಗಿಗಳ ತಪಸ್ಸು ಮಾಡಿ ಅನೇಕ ಪವಾಡ ಮಾಡುವ ಮೂಲಕ ಜನತೆಗೆ ಸಂಸ್ಕೃತಿ, ಧರ್ಮ ಜಾಗೃತಿಯನ್ನು ಮೂಡಿಸಿದ್ದಾರೆ. ಅವರ ಆದರ್ಶಗಳು ಜನತೆಯಲ್ಲಿ ಉಳಿಯುವಂತಾಗಲು ಅವುಗಳ ಪ್ರಚಾರಕ್ಕೆ ಧರ್ಮಗುರುಗಳು ಶ್ರಮಿಸಬೇಕಿದೆ ಎಂದರು.

ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುವ ಮೂಲಕ ಶ್ರೀ ಫಲಹಾರೇಶ್ವರರು ಪವಾಡ ಮಾಡಿದ್ದಾರೆ.

ಅವರಂತೆಯೇ ಮುರಘೇಂದ್ರ ಸ್ವಾಮಿಗಳು ಪವಾಡ ಪುರುಷರಾಗಿ ನಾಡಿನಾದ್ಯಂತ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಅರಳಿಮರದ ಕೆಳಗೆ ಕುಳಿತು ತಪಸ್ಸು ಮಾಡಿದ ಶಿವಯೋಗಿಗಳ ತತ್ವಾದರ್ಶಗಳನ್ನು ನಾಗರಿಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗುಳೇದಗುಡ್ಡ ತೊಗುಣಸಿ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯರು, ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ತಪೋವನ ಪಟ್ಟಾಧಿಕಾರ ಸಮಿತಿಯ ಅಧ್ಯಕ್ಷರಾದ ಪುಲಕೇಶಿ ವಾಲಿ, ಉಪಾಧ್ಯಕ್ಷ ತಿಮ್ಮಣ್ಣ ತಳವಾರ, ಈಶ್ವರ ಹೊಸಕೋಟಿ, ಈರಪ್ಪ ನೀಲಗುಂದ, ಶಿವಾನಂದ ನೀಲಗುಂದ, ಚಂದ್ರಶೇಖರ ಜಕಲಿ, ಬಸವರಾಜ ಗೊಂದಿ, ಈರಪ್ಪ ಮಲಕನ್ನವರ, ಶೇಕರಪ್ಪ ಕಿತ್ತಲಿ, ಹಸನಸಾಬ ಹದ್ಲಿ, ಫಕೀರಪ್ಪ ಬೆಳವಣಕಿ, ಅರಳಿಕಟ್ಟಿ ಕಾಕನೂರ, ಹೊಸಕೇರಿ, ಬೆನ್ನೂರ, ಚಿಕ್ಕತಡಸಿ, ಹಿರೇತಡಸಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಗೌಡಪ್ಪಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT