ADVERTISEMENT

ಜಿಲ್ಲೆಯಲ್ಲಿ 15 ಇಂದಿರಾ ಕ್ಯಾಂಟೀನ್‌; ಸ್ಥಳ ಗುರುತಿಸಿದ ಜಿಲ್ಲಾಡಳಿತ

ಶ್ರೀಕಾಂತ ಕಲ್ಲಮ್ಮನವರ
Published 28 ನವೆಂಬರ್ 2017, 6:20 IST
Last Updated 28 ನವೆಂಬರ್ 2017, 6:20 IST

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ತೆರೆಯಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಬೆಳಗಾವಿ ನಗರದಲ್ಲಿ ಆರು ಹಾಗೂ ಜಿಲ್ಲೆಯ ಇತರ ಒಂಬತ್ತು ತಾಲ್ಲೂಕಿನಲ್ಲಿ ತಲಾ ಒಂದು ಸೇರಿದಂತೆ ಒಟ್ಟು 15 ಕ್ಯಾಂಟೀನ್‌ಗಳನ್ನು ತೆರೆಯಲು ಸ್ಥಳ ಗುರುತಿಸಲಾಗಿದೆ.

ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ನೀಡುವ ಉದ್ದೇಶದಿಂದ ಈಗಾಗಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಮುಂಬರುವ ಜನವರಿ 1ರಿಂದ ರಾಜ್ಯದ ಇತರ ಜಿಲ್ಲೆಗಳಲ್ಲೂ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದಕ್ಕೆ ಪೂರಕವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.

ಅದರಂತೆ, ಜಿಲ್ಲಾಡಳಿತವು ಸ್ಥಳಗಳನ್ನು ಗುರುತಿಸಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಸ್ಥಳ ನಿಗದಿಪಡಿಸಿರುವ ಬಗ್ಗೆ ತಿಳಿಸಿದೆ. ರಾಜ್ಯದೆಲ್ಲೆಡೆ ಒಂದೇ ರೀತಿಯಲ್ಲಿ ಇಂದಿರಾ ಕ್ಯಾಂಟೀನ್‌ ವಿನ್ಯಾಸಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಆ ವಿನ್ಯಾಸದಂತೆ ಇಲ್ಲಿಯೂ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣ, ಕ್ಯಾಂಟೀನ್‌ಗಳ ನಿರ್ವಹಣೆ ಹಾಗೂ ಆಹಾರ ಪೂರೈಸಲು ಟೆಂಡರ್‌ ಕರೆಯಲು ಜಿಲ್ಲಾಡಳಿತವು ಸರ್ಕಾರದ ಅನುಮತಿ ಕೋರಿದೆ.

ADVERTISEMENT

ಜಾಗ ಗುರುತಿಸಲಾಗಿದೆ: ‘ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಕ್ಯಾಂಟೀನ್‌ ತೆರೆಯಲು ಜಾಗ ಗುರುತಿಸಲಾಗಿದೆ. ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಯಬಾಗ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕು ಕೇಂದ್ರಗಳಲ್ಲಿ ಜಾಗ ಗುರುತಿಸಲಾಗಿದೆ. ಇಲ್ಲಿ ತಲಾ ಒಂದು ಕ್ಯಾಂಟೀನ್‌ ತೆರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ತಿಳಿಸಿದರು.

‘ಜಿಲ್ಲಾ ಕೇಂದ್ರವಾದ ಬೆಳಗಾವಿಯಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚಿನ ಜನರು ವಾಸವಾಗಿದ್ದಾರೆ. ಪ್ರತಿದಿನ ಇಲ್ಲಿಗೆ ಆಗಮಿಸುವರ ಸಂಖ್ಯೆಯೂ ದೊಡ್ಡದಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು 6 ಕ್ಯಾಂಟೀನ್‌ ತೆರೆಯಲು ನಿರ್ಧರಿಸಲಾಗಿದೆ. ಜಾಗಗಳನ್ನು ಮಹಾನಗರ ಪಾಲಿಕೆಯು ಗುರುತಿಸಿದೆ’ ಎಂದು ಹೇಳಿದರು.

ಬಸ್‌ ನಿಲ್ದಾಣ, ಆಸ್ಪತ್ರೆ: ‘ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಸ್‌ ನಿಲ್ದಾಣ, ಜಿಲ್ಲಾಸ್ಪತ್ರೆ, ಮಹಾಂತೇಶ ನಗರದ ಕೆಎಂಎಫ್‌ ಡೇರಿ ಆವರಣ, ಆಜಂ ನಗರ, ಗೋವಾವೇಸ್‌ ಬಳಿಯ ಮಹಾನಗರ ಪಾಲಿಕೆಯ ಕಾಂಪ್ಲೆಕ್ಸ್‌ ಹಾಗೂ ಶಹಾಪುರದ ನಾಥ್‌ ಪೈ ವೃತ್ತದ ಬಳಿ ಸ್ಥಳ ಆಯ್ಕೆ ಮಾಡಲಾಗಿದೆ’ ಎಂದು ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ತಿಳಿಸಿದರು.

‘ಆರು ಕ್ಯಾಂಟೀನ್‌ಗಳ ಪೈಕಿ ಒಂದರಲ್ಲಿ ಅಡುಗೆ ತಯಾರಿಸಿ, ಇನ್ನುಳಿದ ಐದು ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಾಗುವುದು’ ಎಂದರು. ‘ರೈಲ್ವೆ ನಿಲ್ದಾಣದ ಎದುರಿಗೆ ಇರುವ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ತೆರೆಯಲು ಯೋಚಿಸುತ್ತಿದ್ದೇವೆ. ಈ ಜಾಗವು ಕ್ಯಾಂಟೋನ್‌ಮೆಂಟ್‌ (ದಂಡು ಪ್ರದೇಶ) ಮಂಡಳಿಗೆ ಸೇರಿದ್ದಾಗಿದೆ. ಅನುಮತಿ ನೀಡುವಂತೆ ಮಂಡಳಿಗೆ ಪತ್ರ ಬರೆಯಲಾಗಿದೆ. ಅವರು ಒಪ್ಪಿದರೆ, ಮೇಲಿನ ಆರು ಸ್ಥಳಗಳ ಪೈಕಿ ಒಂದನ್ನು ರದ್ದುಪಡಿಸಿ ಇಲ್ಲಿ ಆರಂಭಿಸಲಾಗುವುದು’ ಎಂದು ನುಡಿದರು.

ಏನೆಲ್ಲ ಸಿಗುತ್ತದೆ: ಬೆಂಗಳೂರಿನಲ್ಲಿ ಆಗಸ್ಟ್‌ 15ರಂದು ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿವೆ. ಇಲ್ಲಿ ಬೆಳಿಗ್ಗೆ 7.30ರಿಂದ 9.30ಕ್ಕೆ ಉಪಹಾರ, ಮಧ್ಯಾಹ್ನ 12.30ರಿಂದ 3 ಗಂಟೆ ಹಾಗೂ ರಾತ್ರಿ 7.30ರಿಂದ 9 ಗಂಟೆಯವರೆಗೆ ಊಟ ದೊರೆಯುತ್ತದೆ.

ಉಪಹಾರದಲ್ಲಿ ಇಡ್ಲಿ– ಸಾಂಬಾರ, ಪುಳಿಯೋಗರೆ, ಖಾರಾಬಾತ್‌, ಪೊಂಗಲ್‌, ಚಿತ್ರಾನ್ನ, ವಾಂಗಿಬಾತ್‌, ಕೇಸರಿ ಬಾತ್‌ ಸಿಗುತ್ತದೆ. ಊಟದಲ್ಲಿ ಅನ್ನ ಸಾಂಬಾರ, ಮೊಸರನ್ನ, ಟೊಮೆಟೊ ಬಾತ್‌, ಚಿತ್ರಾನ್ನ, ವೆಜಿಟೆಬಲ್‌ ಪುಲಾವ್‌ ಸಿಗುತ್ತದೆ. ಉಪಹಾರಕ್ಕೆ ₹ 5 ಹಾಗೂ ಊಟಕ್ಕೆ ₹ 10 ದರವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಳಗಾವಿ ಜನರು ಕೂಡ ಜನವರಿ ವೇಳೆಗೆ ಇಂದಿರಾ ಕ್ಯಾಂಟೀನ್‌ ಸವಿಯನ್ನು ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.