ADVERTISEMENT

ಟೇಕ್ವಾಂಡೊ: ಧೀರಜ್ ಕಠಾರೆ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 9:48 IST
Last Updated 2 ಆಗಸ್ಟ್ 2015, 9:48 IST

ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ಮಹಾನಗರದಲ್ಲಿ ಈಚೆಗೆ ನಡೆದ ಜಿಂಟು ಓಪನ್‌ ಇಂಟರ ನ್ಯಾಷನಲ್‌ ಚಾಂಪಿಯನ್‌ಶಿಪ್‌ ಟೂರ್ನಿ ಯಲ್ಲಿ ಗೋಕಾಕದ ಯುವಕ ಧೀರಜ್‌ ಟೇಕ್ವಾಂಡೊ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗಳಿಸುವ ಮೂಲಕ ಸಾಧನೆಯ ಓಟವನ್ನು ಮುಂದುವರಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದ ಧೀರಜ್‌ ಅವರು ಸಾಧನೆಯ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಾಲ್ಯದಿಂದಲೇ ಕರಾಟೆಯತ್ತ ಒಲವು ಹೊಂದಿದ್ದ ಧೀರಜ ಅವರಿಗೆ ಹೆತ್ತವರು ನಿರಾಸೆ ಮಾಡಲಿಲ್ಲ. ಮಗನಿಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದೊಂದಿಗೆ ಕರಾಟೆ ಶಿಕ್ಷಣ ಕೊಡಿಸಿದರು. ಟೇಕ್ವಾಂಡೊದಲ್ಲಿ ಆಸಕ್ತಿ ಹೊಂದಿ ನಿರಂತರ ಪರಿಶ್ರಮ ಪಟ್ಟಿದ್ದರಿಂದ ಧೀರಜ್‌ಗೆ ಅಂತರಾಷ್ಟ್ರೀಯ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳಲು ಸ್ಪೂರ್ತಿ ಯಾಯಿತು ಎನ್ನುತ್ತಾರೆ ಆತನ ತಂದೆ ಬಾಳಕೃಷ್ಣ ಧೋಂಡುಸಾ ಕಠಾರೆ.

ಕಸಬು ಮನೆ, ಮನೆಗೆ ತೆರಳಿ ಚಹಾ ಪುಡಿ ಮಾರಾಟ ಮಾಡುವುದು ಧೀರಜ್‌ ಅವರ ಕುಟುಂಬದ ಉದ್ಯೋಗ. ಈ ಕೆಲಸದಿಂದ ಸಿಗುತ್ತಿದ್ದ ಅಷ್ಟಿಷ್ಟು ಆದಾಯದಲ್ಲಿಯೇ ಮಗನಿಗೆ ಕರಾಟೆ ತರಬೇತಿ ನೀಡಿದ ಹೆತ್ತವರು ಈಗ ಮಗನ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಆರನೇ ತರಗತಿಯಲ್ಲಿ ಓದುತ್ತಿ ದ್ದಾಗಲೇ ಕರಾಟೆ ಬಗ್ಗೆ ಆಸಕ್ತಿ ಇತ್ತು. ತಂದೆ–ತಾಯಿ ನನ್ನನ್ನು ಪ್ರೋತ್ಸಾಹಿಸಿ ದ್ದರಿಂದ ನಾನೀಗ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ ಎಂದು ಧೀರಜ್‌ ಕಠಾರೆ ಖುಷಿ ಹಂಚಿಕೊಂಡರು. ನನ್ನ ಟೇಕ್ವಾಂಡೊ ಆಟದಿಂದ ಪ್ರಭಾವಿತಳಾದ ನನ್ನ ಕಿರಿಯ ಸಹೋದರಿ ರೂಪಾ ಸಹ ಕರಾಟೆಯನ್ನು ತನ್ನ ದೈನಂದಿನ ಚಟುವಟಿಕೆಯನ್ನಾಗಿಸಿ ಕರಗತ ಮಾಡಿಕೊಂಡಿದ್ದಾಳೆ ಎಂದು ಧೀರಜ್‌ ಹೆಮ್ಮೆ ಪಡುತ್ತಾರೆ.

‘ನನಗೆ ದೊರೆತ ಪ್ರಶಸ್ತಿಯಿಂದ ಪ್ರಭಾವಿತರಾದ ಭಾರತೀಯ ಒಲಂಪಿಕ್ಸ್ ತರಬೇತಿ ಸಂಸ್ಥೆ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮುಂದೆ ನಡೆಯುವ ಒಲಂಪಿಕ್ಸ್‌ ಪಂದ್ಯದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದೀರಾ ಎಂದು ನನ್ನ ಅಭಿಪ್ರಾಯವನ್ನು ಕೇಳಿದೆ. ಆ ಕುರಿತು ನಾನಿನ್ನೂ ಯಾವುದೇ ನಿಖರ ಅಭಿಪ್ರಾಯಕ್ಕೆ ಬಂದಿಲ್ಲ ಎಂದು ಧೀರಜ ಕಠಾರೆ ಪ್ರತಿಕ್ರಿಯಿಸಿದರು.

ಇಲ್ಲಿಯ ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್‌.ಎಸ್‌. ಪದವಿ ಮಹಾವಿದ್ಯಾಲಯದಲ್ಲಿ ಓದಿ ಕಳೆದ ಏಪ್ರಿಲ್‌ನಲ್ಲಿ ಜರುಗಿದ ಬಿ.ಕಾಂ. ಅಂತಿಮ ವರ್ಷದ ಪದವಿ ಪರೀಕ್ಷೆ ಬರೆದು, ಈಚೆಗಷ್ಟೇ ಪದವಿಯನ್ನು ಸಂಪಾದಿಸಿದ್ದೇನೆ. ಮುಂದೆ ಭವಿಷ್ಯದ ಕುರಿತು ತೀರ್ಮಾನಿಸಬೇಕಾದ ಮಹತ್ವದ ಘಟ್ಟದಲ್ಲಿ ನಾನೀಗ ನಿಂತುಕೊಂಡಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಧೀರಜ್‌ ಕಠಾರೆ ಹೊರಗೆಡುಹಿದರು. ಧೀರಜ್‌ ಕಠಾರೆ ಅವರ ಸಾಧನೆಗೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಈಚೆಗೆ ಸನ್ಮಾಸಿದರು.  -ಅಭಿಷೇಕ ಬಡಿಗೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.