ADVERTISEMENT

ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:12 IST
Last Updated 23 ಏಪ್ರಿಲ್ 2017, 6:12 IST
ಚಿಕ್ಕೋಡಿ ಉಪ ಕಾಲುವೆ ಮೂಲಕ ಹಿರೇಕೋಡಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ರೈತರು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು
ಚಿಕ್ಕೋಡಿ ಉಪ ಕಾಲುವೆ ಮೂಲಕ ಹಿರೇಕೋಡಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ರೈತರು ಶನಿವಾರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು   

ಚಿಕ್ಕೋಡಿ: ಹಿಡಕಲ್ ಜಲಾಶಯದಿಂದ ಚಿಕ್ಕೋಡಿ ಉಪಕಾಲುವೆಗೆ ಹರಿ ಬಿಟ್ಟಿರುವ ನೀರು ತಾಲ್ಲೂಕಿನ ಹಿರೇ ಕೋಡಿ ಗ್ರಾಮಕ್ಕೆ ತಲುಪಿಸಬೇಕು ಎಂದು ಒತ್ತಾಯಿಸಿ ಗ್ರಾಮದ ರೈತರು ಶನಿವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.ಗ್ರಾಮ ಪಂಚಾಯ್ತಿ ಸದಸ್ಯ ವಿಕ್ರಂ ಬನಗೆ ಅವರ ನೇತೃತ್ವದಲ್ಲಿ ನೂರಾರು ರೈತರು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

‘ಕಳೆದ ಮಂಗಳವಾರ ರಾತ್ರಿಯಿಂದ ಹಿಡಕಲ್‌ ಜಲಾಶಯದಿಂದ 3 ಟಿಎಂಸಿ ಅಡಿ ನೀರನ್ನು ಚಿಕ್ಕೋಡಿ ಉಪ ಕಾಲುವೆಗೆ ನೀರು ಬಿಡುಗಡೆ ಮಾಡ ಲಾಗುತ್ತಿದೆ. ಕಾಲುವೆಯ ಕೊನೆಯಂಚಿನ ಗ್ರಾಮಗಳಿಗೂ ನೀರು ತಲುಪಿಸಲಾಗು ವುದು ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಆದರೆ, ಇದುವರಗೆ ಹಿರೇಕೋಡಿವರೆಗೂ ನೀರು ತಲುಪಿಲ್ಲ’ ಎಂದು ವಿಕ್ರಂ ಬನಗೆ ದೂರಿದರು.

‘ಕಾಲುವೆಯ ಗೇಟ್‌ಗಳನ್ನು ತೆರವು ಗೊಳಿಸಿ ಕೆಲವು ಗ್ರಾಮಗಳಲ್ಲಿ ನೀರು ಪಡೆಯಲಾಗುತ್ತಿದ್ದು, ಇದರಿಂದಾಗಿ ಮುಂದಿನ ಗ್ರಾಮಗಳಿಗೆ ನೀರು ಬರುತ್ತಿಲ್ಲ. ಇಂತಹ ಕೃತ್ಯಗಳನ್ನು ತಡೆಯು ವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹಿರೇಕೋಡಿ ಗ್ರಾಮದಲ್ಲಿ ಜನರು, ಜಾನುವಾರುಗಳಿಗೆ ನೀರಿನ ಸಮಸ್ಯೆ ಇದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ಶನಿವಾರ ಸಂಜೆ ಒಳಗಾಗಿ ಹಿರೇಕೋಡಿ ಗ್ರಾಮದವರೆಗಾದರೂ ನೀರು ಹರಿಸಬೇಕು. ಇಲ್ಲದಿದ್ದರೆ ಗ್ರಾಮದ ರೈತರು ಜಾನುವಾರುಗಳೊಂ ದಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

ರೈತರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಸಿ.ಎಸ್‌.ಕುಲಕರ್ಣಿ, ಕಾಲುವೆ ನೀರು ಬಾಣಂತಿಕೋಡಿವರೆಗೆ ತಲುಪಿದ್ದು, ಮುಂದಿನ ಗ್ರಾಮಗಳಿಗೂ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.ಮುಖಂಡರಾದ ವರ್ಧಮಾನ ಸದಲಗೆ, ಬಾಬು ಬಾಳಿಕಾಯಿ, ನಾರಾಯಣ ಮಾಳಿ, ಸುರೇಶ ಕೋಟೆ, ಅಬ್ದುಲ್ ಖಾನಾಪುರೆ, ಮುಜಾವರ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.