ADVERTISEMENT

‘ದಾವಣಗೆರೆ ರಾಜ್ಯದ ರಾಜಧಾನಿ ಆಗಲಿ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 5:44 IST
Last Updated 11 ಸೆಪ್ಟೆಂಬರ್ 2017, 5:44 IST
ರಾಮದುರ್ಗದಲ್ಲಿ ಭಾನುವಾರ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿದರು
ರಾಮದುರ್ಗದಲ್ಲಿ ಭಾನುವಾರ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿದರು   

ರಾಮದುರ್ಗ: ಬೆಂಗಳೂರು ರಾಜಧಾನಿ ಆಗಿದ್ದರಿಂದ ಉತ್ತರ ಕರ್ನಾಟಕದ ಹಲವು ರಾಜಕಾರಣಿಗಳು ಬೆಂಗಳೂರಿಗೆ ಅಲೆದಾಡಿ ಭತ್ಯೆ ಪಡೆಯುವುದಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ರಾಜ್ಯದ ಎಲ್ಲ ಜನತೆಗೆ ಸಂಚರಿಸಲು ಸೂಕ್ತವಾಗುವಂತೆ ರಾಜ್ಯದ ಮಧ್ಯದಲ್ಲಿರುವ ದಾವಣಗೆರೆಯನ್ನು ಕರ್ನಾಟಕದ ರಾಜಧಾನಿ ಮಾಡಬೇಕು ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ನೇತೃತ್ವದಲ್ಲಿ ’ರೈತ ಸ್ವತಂತ್ರ ಧರ್ಮ’ದ ಮಾನ್ಯತೆ ಜಾಗೃತಿ, ಮಹದಾಯಿ ಕಳಸಾ–ಬಂಡೂರಿ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ರಾಜ್ಯ ಮಟ್ಟದ ಕಾವ್ಯ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ಮಂತ್ರಿಗಳಿಗೆ, ಶಾಸಕರಿಗೆ ತಮ್ಮ ಕ್ಷೇತ್ರದ ಸಂಪೂರ್ಣ ಪರಿಚಯವೇ ಇಲ್ಲ. ರಾಜ್ಯದ ಬಗೆಗೂ ತಿಳಿದು ಕೊಂಡಿಲ್ಲ. ಅಂತವರ ವಿದೇಶ ಪ್ರವಾಸ ದಿಂದ ಯಾವುದೆ ಪ್ರಯೋಜನವಾಗದು ಎಂದು ಹೇಳಿದರು.

ADVERTISEMENT

ಕೆಲ ರಾಜಕಾರಣಿಗಳು ಶೋಕಿಗಾಗಿ ವಿದೇಶಿ ಪ್ರವಾಸ ಮಾಡಿ ತಮ್ಮ ಭತ್ಯೆ ಪಡೆಯುವುದರಲ್ಲಿಯೇ ತೊಡಗಿ ಕೊಂಡಿದ್ದಾರೆ. ಇದು ಕನ್ನಡ ನಾಡಿನ ಜನತೆಯ ದುರ್ದೈವದ ಸಂಗತಿ ಕಳವಳ ವ್ಯಕ್ತ ಪಡಿಸಿದರು.

ರಾಜಕಾರಣಿಗೆ, ಮಂತ್ರಿಗಳಿಗೆ ಹೊಸ ಕಾರು ಬೇಕು, ಮನೆ ಅಲಂಕಾರಕ್ಕೆ ಕೋಟ್ಯಾಂತರ ರೂಪಾಯಿ ದುಡ್ಡು ಬೇಕು. ವಿನಾಕಾರಣ ಅಲೆದಾಡಿ ಭತ್ಯೆ ಪಡೆಯುತ್ತಿದ್ದಾರೆ. ಐಷರಾಮಿ ಜೀವನ ನಡೆಸುವರು ಮೊದಲು ಏನಾಗಿದ್ದರು ಎಂದು ತಿಳಿದುಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲಿ ಎಂದರು.

ಕರ್ನಾಟಕದ ಅಭಿವೃದ್ಧಿ ಎಂದರೆ ಕೆಲ ರಾಜಕಾರಣಿಗಳಿಗೆ ಮೈಸೂರು ಪ್ರದೇಶದ ಅಭಿವೃದ್ಧಿ ಎಂದು ತಿಳಿದು ಕೊಂಡಂತಿದೆ. ರಾಜ್ಯದ ಸಾಕಷ್ಟು ಹೋರಾಟಗಾರರು ಉತ್ತರ ಕರ್ನಾಟಕದಿಂದಲೇ ನಾಡಿಗೆ ತಮ್ಮ ತ್ಯಾಗ ಬಲಿದಾನದ ಕೊಡುಗೆ ನೀಡಿದ್ದಾರೆ. ಆದರೆ ಆ ನಾಡಿನ ಅಭಿವೃದ್ಧಿಯನ್ನೆ ರಾಜಕಾರಣಿಗಳು ಕಡೆಗಣಿಸುತ್ತಿರುವುದು ನೋವುಂಡು ಮಾಡಿದೆ ಎಂದು ಹೇಳಿದರು.

ಕನ್ನಡ ನಾಡು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ಕನ್ನಡದ ಬಗೆಗೆ ಕಾಳಜಿ ಹೊಂದಿ, ಸಮಯ ಪ್ರಜ್ಞೆ, ಪ್ರಜ್ಞಾವಂತಿಕೆ, ಸ್ವಂತಿಕೆ ಎದೆಗಾರಿಕೆ ಹೊಂದಿ ಹೋರಾಟ ಮಾಡಬೇಕು. ಕೇವಲ ವಿಜಿಟಿಂಗ್‌ ಕಾರ್ಡ್‌ಗಾಗಿ ಸಂಘಟನೆ ಬೇಕಿಲ್ಲ ಎಂದು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಮಹದಾಯಿ ಕಳಸಾ–ಬಂಡೂರಿ ಜೋಡನೆ ಅವರಿಗೆ ಬೇಕಿಲ್ಲ. ರೈತರಿಗೆ ಕೇವಲ ಹೋರಾಟ ಮಾಡುವುದೇ ಕೆಲಸವಾಗಿದೆ. ರೈತರ ಬೇಡಿಕೆ ಪಡೆಯಲು ಸಂಘಟಿತರಾಗಿ ರೈತ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಮಾತನಾಡಿ, ಮಹದಾಯಿ ಕಳಸಾ–ಬಂಡೂರಿ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು. ದೇಶಕ್ಕೆ ಅನ್ನ ನೀಡುವ ರೈತರನ್ನು ಕಡೆಗಣಿಸಿದವರಿಗೆ ತಕ್ಕ ಪಾಠ ಕಲಿಸಲು ರೈತಪರ ಸಂಘಟನೆಗಳು ಮುಂದಾಗಬೇಕು ಎಂದು ಹೇಳಿದರು.

ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ರಾಜ್ಯ ಉಪಾಧ್ಯಕ್ಷ ಚಂದ್ರ ಶೇಖರ ಗಂಗಣ್ಣವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ಶ್ರೀಧರ ಆಸಂಗಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಮದುರ್ಗ ಸುಧಾರಣಾ ಸಮಿತಿ ಅಧ್ಯಕ್ಷ ವೆಂಕಟೇಶ ಹಿರೇರಡ್ಡಿ, ರೈತ ಸೇನೆಯ ಮಹಿಳಾ ಪದಾಧಿಕಾರಿಗಳಾದ ಮಹಾದೇವಿ ಪರಾಳಶೆಟ್ಟಿ, ಸಾವಿತ್ರಿ ಪಾಟೀಲ, ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಜಗದೀಶ ದೇವರಡ್ಡಿ, ಸವದತ್ತಿ ರೈತ ಹೋರಾಟಗಾರ ಶಂಕರ ವಣ್ಣೂರ ದಾದಾಪೀರ ಹಾಜಿ, ಸಿಕಂದರ ಮಹಾತ, ಶಶಿಕಾಂತ ನೆಲ್ಲೂರ ಇದ್ದರು. ಚನಬಸಪ್ಪ ಚೌಗಲಾ ಸ್ವಾಗತಿಸಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿದರು.

* * 

ಕರ್ನಾಟಕದ ಅಭಿವೃದ್ಧಿ ಎಂದರೆ ಕೆಲ ರಾಜಕಾರಣಿಗಳಿಗೆ ಮೈಸೂರು ಪ್ರದೇಶದ ಅಭಿವೃದ್ಧಿ ಎಂದು ತಿಳಿದು ಕೊಂಡಂತಿದೆ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಅಗತ್ಯ
ಪಾಟೀಲ ಪುಟ್ಟಪ್ಪ
ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.