ADVERTISEMENT

ನಗರೋತ್ಥಾನ ಯೋಜನೆಯಡಿ ₹4.25 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 7:32 IST
Last Updated 3 ಡಿಸೆಂಬರ್ 2017, 7:32 IST

ಘಟಪ್ರಭಾ : ಅರಭಾವಿ ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ₹4.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಅರಭಾವಿಯಲ್ಲಿ ಶನಿವಾರ ಆಂಜನೇಯ ದೇವರ ದರ್ಶನ ಪಡೆದು ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜನವರಿ ತಿಂಗಳಲ್ಲಿ ಕಾಮಗಾರಿ ಕೂಡ ಆರಂಭವಾಗಲಿದೆ. ಇದರಡಿ ರಸ್ತೆ ಕಾಮಗಾರಿ, ₹1.10 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ, ₹60 ಲಕ್ಷ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ ಹಾಗೂ ಒಳಚರಂಡಿ ನಿರ್ಮಾಣಕ್ಕೆ ₹30 ಲಕ್ಷ ವೆಚ್ಚದ ಕಾಮಗಾರಿಗಳು ಸೇರಿವೆ ಎಂದರು.

ADVERTISEMENT

ಅರಭಾವಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸರ್ಕಾರದ ಯೋಜನೆಗಳ ಆಯ್ಕೆಯಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಸೂಚನೆ ನೀಡಿದರು. ಅರಭಾವಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಶಾಸಕರು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಆಂಜನೇಯ ದೇವಸ್ಥಾನದಲ್ಲಿ ಅರ್ಚಕ ಮಾರುತಿ ಪೂಜೇರಿ ಅವರು ಸತ್ಕರಿಸಿದರು.

ಶಂಕರ ಬಿಲಕುಂದಿ, ರಾಯಪ್ಪ ಬಂಡಿವಡ್ಡರ, ಭೀಮಪ್ಪ ಹಳ್ಳೂರ, ನಿಂಗಪ್ಪ ಇಳಿಗೇರ, ಕೆಂಪಣ್ಣ ಕಡಲಗಿ, ಸಾತಪ್ಪ ಜೈನ್, ವಿಠ್ಠಲ ಸವದತ್ತಿ, ರಮೇಶ ಮಾದರ, ಮಹಾಂತೇಶ ನೇಮಗೌಡರ, ಲಕ್ಷ್ಮಣ ನಿಂಗನ್ನವರ, ಕೆಂಚಪ್ಪ ಸಂಪಗಾಂವಿ, ಸುನೀಲ-ಅನೀಲ ಜಮಖಂಡಿ, ಮಹಾದೇವ ಗುಡಿತೋಟ, ರಮೇಶ ಸಂಪಗಾಂವಿ, ವಿಠ್ಠಲ ದೇವುಗೋಳ, ಸತ್ತೆಪ್ಪ ಬಡಾಯಿ, ಬಸವರಾಜ ಆಲೋಶಿ, ಮೋಹನ ಬಂಡಿವಡ್ಡರ, ಭೀಮಪ್ಪ ಕಡ್ಡಿ, ಆನಂದ ನಿಪನಾಳ, ಸಂಜು ಖಾನಪ್ಪನವರ, ನಾಗಪ್ಪ ಹೊಲದವರ, ವಿಠ್ಠಲ ಸಂತುಗೋಳ, ತಮ್ಮಣ್ಣ ಜಮಖಂಡಿ, ಕುಮಾರ ಪೂಜೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.