ADVERTISEMENT

ನಟ ಸುದೀಪ್ ಅಭಿಮಾನಿಗಳ ಆತ್ಮಹತ್ಯೆ ಬೆದರಿಕೆ: ಹುಚ್ಚಾಟ

ಸುದೀಪ್‌ ಬಾರದೇ ಭ್ರಮನಿರಸನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:24 IST
Last Updated 9 ಮಾರ್ಚ್ 2017, 11:24 IST
ಬೆಳಗಾವಿ: ‘ಚಿತ್ರನಟ ಕಿಚ್ಚ ಸುದೀಪ್‌ ಅವರನ್ನು ನೋಡಲೇಬೇಕು, ಇಲ್ಲವಾ­ದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳು­ತ್ತೇವೆ’ ಎಂದು ಯುವಕರಿಬ್ಬರು ಪೆಟ್ರೋಲ್‌ ಬಾಟಲಿಗಳ ಸಮೇತ ಬಂದು ಹುಚ್ಚಾಟವಾಡಿದ ಘಟನೆ ಇಲ್ಲಿನ ರಾಣಿ ಚನ್ನಮ್ಮ ವೃತ್ತದ ಸಮೀಪ ಬುಧವಾರ ನಡೆದಿದೆ.
 
ಸುದೀಪ್‌ ಅಭಿಮಾನಿಗಳು ಎನ್ನ­ಲಾದ, ತಾಲ್ಲೂಕಿನ ಭೂತರಾಮನ­ಹಟ್ಟಿಯ ಸಚಿನ್‌ ಪಾಟೀಲ ಹಾಗೂ ಪ್ರವೀಣ ಪಾಟೀಲ ಎಂಬ ಯುವಕ­ರಿಬ್ಬರು ಇಂಥ ಅಂಧಾಭಿಮಾನ ಪ್ರದ­ರ್ಶಿಸಿ, ನೆರೆದಿದ್ದ ಸಾರ್ವಜನಿಕರ ಗೇಲಿಗೆ ಒಳಗಾದರು. ಗುರುವಾರದಿಂದ ಆರಂಭ­­ವಾಗುವ ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಬಿಟ್ಟು, ಸುದೀಪ್‌ ನೋಡಬೇಕು ಎಂದು ಪಟ್ಟು ಹಿಡಿದಿದ್ದ ಅವರಿಗೆ ಪೊಲೀಸರು ಬುದ್ಧಿವಾದ ಹೇಳಿದರು.
 
ಈ ಯುವಕರು ಆತ್ಮಹತ್ಯೆ ಮಾಡಿಕೊಳ್ಳಲೆಂದು ಬೆಂಕಿಕಡ್ಡಿ ಪೊಟ್ಟಣ ಹಾಗೂ ಬಾಟಲಿಗಳಲ್ಲಿ ಪೆಟ್ರೋಲ್‌ ತಂದಿದ್ದರು. ಇದನ್ನು ಮಾಧ್ಯಮದವರು ಹಾಗೂ ಪೊಲೀಸರು ಗಮನಿಸಿದ್ದರಿಂದ ಅವರ ಉದ್ದೇಶ ಬೆಳಕಿಗೆ ಬಂದಿತು. ಎದೆಯ ಮೇಲೆ ‘ಕಿಚ್ಚ ಸುದೀಪ’ ಎಂದು ಬರೆಸಿಕೊಂಡಿದ್ದನ್ನು ತೋರಿಸಿದ ಸಚಿನ್‌, ‘ನಾನು ಸುದೀಪ್‌ ಅವರ ದೊಡ್ಡ ಅಭಿ­ಮಾನಿ. ಅವರನ್ನು ನೋಡಲೇ­ಬೇಕು.

ಇಲ್ಲವಾದಲ್ಲಿ ಬದು­ಕು­ವುದಿಲ್ಲ. ನನಗೆ ಪರೀಕ್ಷೆ ಮುಖ್ಯವಲ್ಲ. ಸುದೀಪ್‌ ಭೇಟಿಯಾಗುವುದು ಮುಖ್ಯ’ ಎಂದು ಪಟ್ಟು ಹಿಡಿದ. ಕೂಡಲೇ ಕಾರ್ಯ­ಪ್ರವೃತ್ತ­ರಾದ ಪೊಲೀಸರು, ಅವರಿಂದ ಪೆಟ್ರೋಲ್‌ ಬಾಟಲಿ ಹಾಗೂ ಬೆಂಕಿಕಡ್ಡಿ ಪೊಟ್ಟಣ ವಶಕ್ಕೆ ಪಡೆದರು. ಕಾರ್ಯ­ಕ್ರಮ­­ವೊಂದರಲ್ಲಿ ಭಾಗವಹಿ­ಸಲು ಬಂದಿದ್ದ ಡಿಸಿಪಿ ಜಿ. ರಾಧಿಕಾ ಕೂಡ ಯುವಕರಿಗೆ ತಿಳಿಸಿ ಹೇಳಿದರು. ಅವ­ರನ್ನು ಆಪ್ತಸಮಾಲೋಚನೆಗೆ ಒಳಪಡಿ­ಸು­ವಂತೆ ಪೊಲೀಸರಿಗೆ ಸೂಚಿಸಿದರು.
 
ಸುದೀಪ್‌ ಬಾರದೇ ಭ್ರಮನಿರಸನ
‘ಹೆಬ್ಬುಲಿ ಚಲನಚಿತ್ರದ ಪ್ರಚಾರಕ್ಕಾಗಿ ರಾಜ್ಯದ ವಿವಿಧೆಡೆ ಸಂಚರಿಸುತ್ತಿರುವ ಸುದೀಪ್‌, ಬೆಳಗಾವಿಗೂ ಬರುತ್ತಾರೆ ಎಂದು ಭಾವಿಸಿದ್ದ ಇವರು, ‘ಹೆಬ್ಬುಲಿ’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರ­ಗಳ ಬಳಿ ಎರಡು ದಿನಗಳಿಂದಲೂ ಅಲೆದಾಡಿದ್ದಾರೆ. ಹುಬ್ಬಳ್ಳಿ ನಂತರ ಬೆಳಗಾವಿಗೆ ಸುದೀಪ್‌ ಬರುತ್ತಾರೆಂದು ತಿಳಿದಿದ್ದರು.

ಅದರೆ, ಸುದೀಪ್‌ ಬರುವ ಲಕ್ಷಣ ಕಾಣಲಿಲ್ಲವಾದ್ದರಿಂದ, ಭ್ರಮ­ನಿರಸ­ನ­­ಗೊಂಡು ಆತ್ಮಹತ್ಯೆ ಮಾಡಿ­ಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಕನ್ನಡ ಸಾಹಿತ್ಯ ಭವನದ ಬಳಿ ಅವರನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳ­ಲಾ­ಯಿತು. ನಂತರ  ಕೌನ್ಸೆಲಿಂಗ್ ನಡೆ­ಸಲಾ­ಗಿದೆ. ಸಾಧ್ಯ­ವಾದರೆ, ಸುದೀಪ್ ಅವ­ರೊಂದಿಗೆ ದೂರವಾಣಿಯಲ್ಲಿ ಮಾತ­ ನಾಡಿಸಿ ಸಮಾಧಾನಪಡಿಸಿ, ಪೋಷಕ­ರೊಂದಿಗೆ ಮನೆಗೆ ಕಳುಹಿಸಲಾಗುವುದು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಖಡೇಬಜಾರ್‌ ಠಾಣೆ ಪೊಲೀಸರು  ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.