ADVERTISEMENT

ನಿಷೇಧಿತ ರಾಸಾಯನಿಕ ಬಳಕೆ ಹೆಚ್ಚಳ

ಬೆಳಗಾವಿಯಲ್ಲಿ 15ಕ್ಕೂ ಹೆಚ್ಚು ಹೋಟೆಲ್‌, ಡಾಬಾಗಳಿಗೆ ₹ 35ಸಾವಿರ ದಂಡ

ಎಂ.ಮಹೇಶ
Published 13 ಜುಲೈ 2017, 12:00 IST
Last Updated 13 ಜುಲೈ 2017, 12:00 IST

ಬೆಳಗಾವಿ: ನೀವು ಫಾಸ್ಟ್‌ಫುಡ್‌ ಪ್ರಿಯರೆ, ಚೈನೀಸ್‌ ತಿನಿಸುಗಳನ್ನು ಇಷ್ಟುಪಡುವವರೇ, ಹೋಟೆಲ್‌ಗಳಲ್ಲಿ ಗೋಬಿ ಮಂಚೂರಿ, ನೂಡಲ್ಸ್‌, ಎಗ್‌ರೈಸ್‌ ತಿನ್ನುವವರೇ? ಕೊಂಚ ತಾಳಿ! ಇನ್ಮುಂದೆ ಇಂತಹ ಪದಾರ್ಥಗಳನ್ನು ಆರ್ಡರ್‌ ಮಾಡುವಾಗ ಮತ್ತು ಸೇವಿಸುವಾಗ ಎಚ್ಚರದಿಂದಿರಿ.

ನಗರ ಹಾಗೂ ಜಿಲ್ಲೆಯಾದ್ಯಂತ ನಿಷೇಧಿತ ‘ಅಜಿನೊಮೋಟೊ’ ರಾಸಾಯನಿಕ ಪದಾರ್ಥದ ಬಳಕೆ ಚಾಲ್ತಿಯಲ್ಲಿರುವುದು ಇಂಥದೊಂದು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳ ಕಣ್ತಪ್ಪಿಸಿ ಈ ಬಳಸುತ್ತಿದ್ದಾರೆ.

ವೈಜ್ಞಾನಿಕ ಭಾಷೆಯಲ್ಲಿ ‘ಮೋನೋಸೋಡಿಯಂ ಗ್ಲುಟ್‌ಮೇಟ್‌’ (ಎಂಎಸ್‌ಬಿ) ಎಂದು ಕರೆಯಲಾಗುವ ಈ ರಸಾಯನಿಕ (ಪುಡಿ) ಹಾಕುವುದರಿಂದ ಆಹಾರದ ರುಚಿ ಹೆಚ್ಚುತ್ತದೆ ಎಂದು ಭಾವಿಸಲಾಗಿದೆ ಹಾಗೂ ಹೋಟೆಲ್‌, ಡಾಬಾ, ರಸ್ತೆಬದಿ ತಳ್ಳುಗಾಡಿಗಳಲ್ಲಿ ಮಾಡಲಾಗುವ ಫಾಸ್ಟ್‌ಫುಡ್‌ಗಳಲ್ಲಿ ಇದರ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ.

ADVERTISEMENT

ಎಂಎಸ್‌ಜಿ ಪ್ರಮಾಣ ನಿಗದಿಗಿಂತ ಹೆಚ್ಚಿದೆ ಎನ್ನುವ ಕಾರಣಕ್ಕೆ ಹಿಂದೆ ಮ್ಯಾಗಿ ಮಾರಾಟವನ್ನು ನಿಷೇಧಿಸಲಾಗಿತ್ತು. ಆರೋಗ್ಯಕ್ಕೆ ಮಾರಕ ಆಗಿರುವುದರಿಂದ ಈ ರಸಾಯನಿಕ ಮಾರುವುದನ್ನು ಹಾಗೂ ಬಳಸುವುದನ್ನು ರಾಜ್ಯದಾದ್ಯಂತ ನಿಷೇಧಿಸಲಾಗಿದೆ. ಆದರೆ, ಗಡಿ ಜಿಲ್ಲೆಯಲ್ಲಿ ಇದರ ಬಳಕೆ ನಿಂತಿಲ್ಲದಿರುವುದು ಕಳವಳ ಮೂಡಿಸಿದೆ.

ಏನಿದು ಬೆಳವಣಿಗೆ?:  ಇತರ ದೊಡ್ಡ ನಗರಗಳಂತೆ ಕುಂದಾನಗರಿಯಲ್ಲಿಯೂ ಫಾಸ್ಟ್‌ಫುಡ್‌ ಸಂಸ್ಕೃತಿ ಕಂಡುಬರುತ್ತಿದೆ. ಪ್ರಮುಖ ವೃತ್ತಗಳ ಬಳಿ ಅಲ್ಲಲ್ಲಿ ರಸ್ತೆಬದಿ ತಿಂಡಿ–ತಿನಿಸು ಮಾರಾಟ ಮಾಡುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ದಿಢೀರ್‌ ಆಹಾರ ಪದಾರ್ಥ ತಯಾರಿಕೆಗೆ ಹೆಸರುವಾಸಿಯಾದ ‘ಫಾಸ್ಟ್‌ಫುಡ್‌’ಗಳ ಸಂಖ್ಯೆಯೂ ಕಡಿಮೆ ಇಲ್ಲ. ಇಂತಹ ಸ್ಥಳಗಳಲ್ಲಿ ಯಾವುದೇ ಅಂಜಿಕೆ ಇಲ್ಲದೆ ಅಜಿನೊಮೋಟೋವನ್ನು ‘ರುಚಿಯ ಪುಡಿ’ ಹೆಸರಿನಲ್ಲಿ ಬಳಸುತ್ತಿರುವುದು ದೃಢಪಟ್ಟಿದೆ.

ಇದು ಎಲ್ಲಿಂದ ಪೂರೈಕೆಯಾಗುತ್ತಿದೆ ಎನ್ನುವುದು ಅಧಿಕಾರಿಗಳ ತಲೆನೋವಿಗೂ ಕಾರಣವಾಗಿದೆ. ಈ ಜಾಲದ ಪತ್ತೆಗಾಗಿ ಅವರು ನಡೆಸಿದ ಪ್ರಯತ್ನ ಇನ್ನೂ ಸಫಲಗೊಂಡಿಲ್ಲ!
15ಕ್ಕೂ ಹೆಚ್ಚು ಹೋಟೆಲ್‌ ಹಾಗೂ ಡಾಬಾಗಳಲ್ಲಿ ಈ ರಸಾಯನಿಕವನ್ನು ಬಳಸುತ್ತಿರುವುದು ಅಧಿಕಾರಿಗಳು ನೇತೃತ್ವದಲ್ಲಿ ನಡೆಸಿದ ದಾಳಿ ವೇಳೆ ಕಂಡುಬಂದಿದೆ. ಒಟ್ಟಾರೆ ₹ 35ಸಾವಿರ ದಂಡ ವಿಧಿಸಲಾಗಿದೆ.

ಇಷ್ಟು ದೊಡ್ಡ ಸಂಖ್ಯೆಯ ಹೋಟೆಲ್‌, ಡಾಬಾ, ಚೈನೀಸ್‌ ಫಾಸ್ಟ್‌ಫುಡ್‌ಗಳಲ್ಲಿ ನಿಷೇಧಿತ ರಸಾಯನಿಕ ದೊರೆತಿರುವುದು ಆಹಾರ ಸುರಕ್ಷತೆಯ ಕುರಿತು ಅನುಮಾನ ಮೂಡುವುದಕ್ಕೆ ಕಾರಣವಾಗಿದೆ. ಅವ್ಯಾಹತವಾಗಿ ಮಾರಾಟ ಆಗುತ್ತಿರುವುದನ್ನು ಖಚಿತಪಡಿಸಿದೆ.

ಪರಿಣಾಮವೇನು?: ‘ಸಣ್ಣ ಫಾಸ್ಟ್‌ಫುಡ್‌ಗಳು, ಹೋಟೆಲ್‌, ಡಾಬಾಗಳಲ್ಲಿ ನಿಷೇಧಿತ ರಸಾಯನಿಕ ಬಳಸದಂತೆ ಸೂಚಿಸಲಾಗಿದೆ. ಎಚ್ಚರಿಕೆಯ ನೋಟಿಸ್‌ ಜಾರಿಗೊಳಿಸಲಾಗಿದೆ. ಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಗಿದೆ.

ಉಪ್ಪಿನಂತೆ ಕಾಣುವ ಈ ವಿಷಕಾರಿ ರಸಾಯನಿಕ ಮನುಷ್ಯನ ದೇಹವನ್ನು ಸೇರುವುದರಿಂದ ಕ್ಯಾನ್ಸರ್‌, ಬೊಜ್ಜು, ತಲೆನೋವು, ಹೃದಯ ಸಂಬಂಧಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದ್ದರಿಂದಲೇ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ’ ಎನ್ನುತ್ತಾರೆ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಎಂ. ಎಸ್‌. ಪಲ್ಲೇದ.

‘ಆಹಾರ ತಯಾರಕರು ಈ ವಿಷಯದಲ್ಲಿ ಬಹಳ ಎಚ್ಚರ ವಹಿಸಬೇಕು. ಗ್ರಾಹಕರು ಕೂಡ ವಿಷಕಾರಿ ರಸಾಯನಿಕ ಬಳಕೆ ಕುರಿತು ಪ್ರಶ್ನಿಸಬೇಕು. ಮಾಹಿತಿ ದೊರೆತಲ್ಲಿ ತಮಗೆ ನೀಡಬೇಕು’ ಎಂದು ಕೋರುತ್ತಾರೆ ಅವರು.

***

ಬಳಕೆ ತಡೆಗೆ ಕ್ರಮ
ನಿಷೇಧಿತ ‘ಅಜಿನೊಮೋಟೊ’ ರಸಾಯನಿಕ ಬಳಸಿದ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಕ್ಯಾನ್ಸರ್‌ ಮೊದಲಾದ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರ ಬಳಕೆ ತಡೆಯುವುದಕ್ಕಾಗಿ ಕ್ರಮ ವಹಿಸಲಾಗಿದೆ. ಅರಿವು ಮೂಡಿಸಲಾಗುತ್ತಿದೆ.
– ಡಾ.ಎಂ.ಎಸ್. ಪಲ್ಲೇದ, ಆಹಾರ ಸುರಕ್ಷತೆ ಅಂಕಿತ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.