ADVERTISEMENT

ಬರ ನಿರ್ವಹಣೆಗೆ ಪ್ರತಿ ಮತಕ್ಷೇತ್ರಕ್ಕೆ ₹ 1.35 ಕೋಟಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 9:59 IST
Last Updated 28 ಜನವರಿ 2017, 9:59 IST
ಬರ ನಿರ್ವಹಣೆಗೆ ಪ್ರತಿ ಮತಕ್ಷೇತ್ರಕ್ಕೆ ₹ 1.35 ಕೋಟಿ
ಬರ ನಿರ್ವಹಣೆಗೆ ಪ್ರತಿ ಮತಕ್ಷೇತ್ರಕ್ಕೆ ₹ 1.35 ಕೋಟಿ   

ಬೈಲಹೊಂಗಲ:ಬರ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1.35 ಕೋಟಿ ಹಣ ನೀಡಲಾಗಿದೆ. 40 ಗೋಶಾಲೆ ಆರಂಭಿಸಲಾಗಿದೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಎ.ಮಂಜು ಹೇಳಿದರು.

ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಕೃಷಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ₹ 1.50 ನಲ್ಲಿ ಕೆ.ಜಿ. ಮೇವು ನೀಡಲು ಕ್ರಮ ಜರುಗಿಸಲಾಗಿದೆ ಎಂದರು.

ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರಕ್ಕೆ ₹4 ಸಾವಿರ ಕೋಟಿ ಅನುದಾನ ನೀಡಲು ಪ್ರಸ್ತಾವ ಸಲ್ಲಿಸಿದ್ದು ಕೇವಲ ₹1,570 ಕೋಟಿ ಅನುದಾನ ನೀಡಲಾಗಿದೆ ಎಂದು ಮಂಜು ತಿಳಿಸಿದರು.

ಹೈನುಗಾರಿಕೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಎಲ್ಲ ತಾಲ್ಲೂಕುಗಳಲ್ಲಿ ಪಶುಗಳಿಗಾಗಿ ಅಂಬುಲೆನ್ಸ್ ನೀಡಲಾಗುತ್ತಿದೆ ಎಂದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ರೈತರು ಹೊಸತನವನ್ನು ಮೈಗೂಡಿಸಿ ಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು. ರಾಜ್ಯ, ಕೇಂದ್ರ ಸರ್ಕಾರದ ಕೃಷಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕರಾದ ಡಿ.ಬಿ.ಇನಾಮದಾರ, ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಎಚ್.ಎಂ.ರೇವಣ್ಣ, ಬಾಗಲಕೋಟೆಯ ತೋಟಗಾರಿಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್. ಮಹೇಶ್ವರ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್, ಐಡಿಬಿಐ ಮಹಾ ಪ್ರಬಂಧಕ ವಾಸುದೇವನ್, ಹೇಮಾವತಿ ಹೆಗ್ಗಡೆ ವೇದಿಕೆಯಲ್ಲಿ ಇದ್ದರು.

ಇದೇ ವೇಳೆ ಎಂಟು ಜನ ಕೃಷಿ ಸಾಧಕರನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು. ಡಾ.ಎಲ್.ಎಚ್. ಮಂಜುನಾಥ ಸ್ವಾಗತಿಸಿದರು. ಗಾಯಕ ಕುಮಾರ ಕಡೇಮನಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.