ADVERTISEMENT

‘ಬಿಸಿ ಸುದ್ದಿ ಕೊಡುವ ಭರದಲ್ಲಿ ಭವಿಷ್ಯಕ್ಕೆ ಕುತ್ತು’

‘ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮದ ಪಾತ್ರ’ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:11 IST
Last Updated 22 ಏಪ್ರಿಲ್ 2017, 7:11 IST
‘ಬಿಸಿ ಸುದ್ದಿ ಕೊಡುವ ಭರದಲ್ಲಿ ಭವಿಷ್ಯಕ್ಕೆ ಕುತ್ತು’
‘ಬಿಸಿ ಸುದ್ದಿ ಕೊಡುವ ಭರದಲ್ಲಿ ಭವಿಷ್ಯಕ್ಕೆ ಕುತ್ತು’   
ಬೆಳಗಾವಿ: ಮಕ್ಕಳು ಹಾಗೂ ಅವರ ಹಕ್ಕುಗಳ ಸಂರಕ್ಷಣೆಯ ವಿಷಯದಲ್ಲಿ ಪತ್ರಕರ್ತರು ಸಂವೇದನಾಶೀಲರಾಗಿ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಇಲ್ಲಿ ಹೇಳಿದರು.
 
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಪಂಚಾಯ್ತಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇಲ್ಲಿನ ಸ್ಪಂದನ ಸಂಸ್ಥೆ, ಯುನಿಸೆಫ್‌ ಮಕ್ಕಳ ಸಂರಕ್ಷಣಾ ಯೋಜನೆ–ಕೊಪ್ಪಳ ಹಾಗೂ ಬೆಂಗಳೂರಿನ ವರ್ಬಿಂಡನ್‌ ಸಂಸ್ಥೆ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.
 
‘ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಾಧ್ಯಮದ ಕೊಡುಗೆ ದೊಡ್ಡದಾಗಿದೆ. ಸಮಾಜವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗೂ ಮಾಧ್ಯಮ ಗಮನ ನೀಡುತ್ತಿದೆ.
 
ಆದರೆ, ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮದವರು ಸ್ಪರ್ಧೆ ಮತ್ತು ಪೈಪೋಟಿಗೆ ಸಿಲುಕಿ ಬಿಸಿಬಿಸಿ ಸುದ್ದಿ ಕೊಡಬೇಕು ಎನ್ನುವ ಭರದಲ್ಲಿ, ಭವಿಷ್ಯದ ದುಷ್ಪರಿಣಾಮಗಳ ಕುರಿತು ಚಿಂತಿಸದೆ ವರದಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.
 
ನಿಗಾ ವಹಿಸಬೇಕು: ‘ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅವರ ಕುಟುಂಬದವರ ಪರಿಚಯ ಪ್ರಕಟಿಸಬಾರದು. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವ ಕಾಳಜಿ ಒಪ್ಪತಕ್ಕದ್ದೆ. ಆದರೆ, ಆಕೆ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಮಾಡಬೇಕು. ವಿಶೇಷವಾಗಿ ದೃಶ್ಯ ಮಾಧ್ಯಮದವರು ಈ ವಿಷಯದಲ್ಲಿ ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.
 
‘ಪತ್ರಕರ್ತರು ನ್ಯಾಯಾಧೀಶರಿಗಿಂತಲೂ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಏಕೆಂದರೆ, ಪತ್ರಿಕಾ ವರದಿಗಳಿಗೆ ಅಪೀಲು ಸಲ್ಲಿಸಲಾಗದು. ಹೀಗಾಗಿ, ಮಕ್ಕಳ ಸಂರಕ್ಷಣೆ, ಅವರ ಹಕ್ಕುಗಳ ಬಗ್ಗೆ ವರದಿ ಮಾಡುವಾಗ ಎಚ್ಚರಿಕೆ ಹಾಗೂ ಸಂವೇದನಾಶೀಲರಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ತಿಳಿಸಿದರು.
 
ಉಪ ಪೊಲೀಸ್‌ ಆಯುಕ್ತೆ ಜಿ. ರಾಧಿಕಾ ಮಾತನಾಡಿ, ‘ಇಲ್ಲಿನ ಕಾಕತಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮಾಧ್ಯಮ ಸಂಯಮದಿಂದ ವರ್ತಿಸಿತು. ಬಾಲಕಿ ಹಾಗೂ ಪೋಷಕರ ಪರಿಚಯ ಮಾಡಿಕೊಡದ ರೀತಿಯಲ್ಲಿ ವರದಿಗಳು ಬಂದವು. ಇದರಿಂದಾಗಿ ಆಕೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಳು’ ಎಂದರು.
 
ಆರ್‌ಟಿಇನಲ್ಲಿ ಹೆಚ್ಚಿನ ದೂರು: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಿರಿಯ ಸಹಾಯಕ ನಿರ್ದೇಶಕಿ ಉಷಾ ಮಾತನಾಡಿ, ‘ವಿಶ್ವಸಂಸ್ಥೆ ರೂಪಿಸಿದ ಮಕ್ಕಳ ಹಕ್ಕುಗಳ ಒಡಂಬಂಡಿಕೆಗೆ ಭಾರತ ಸಹಿ ಮಾಡಿ ಹಲವು ವರ್ಷಗಳೇ ಕಳೆದಿವೆ.
 
ಆದರೆ, ಸುಧಾರಣೆಯ ಚಿತ್ರಣ ಸಂತೋಷದಾಯಕವಾಗಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ 40ರಷ್ಟು ಪ್ರಮಾಣದಲ್ಲಿ ಮಕ್ಕಳಿದ್ದಾರೆ. ಇವರಲ್ಲಿ ಶೇ 40ರಷ್ಟು ಮಂದಿ ಒಂದಿಲ್ಲೊಂದು ಸಂಕಷ್ಟದಲ್ಲಿದ್ದಾರೆ. ವಿವಿಧ ರೀತಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
 
‘ಆಯೋಗದಲ್ಲಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿವೆ. ಮಕ್ಕಳ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಮಕ್ಕಳಿಗೆ ಇರುವ ಸಮಸ್ಯೆಗಳನ್ನು ಗಮನಿಸಿದರೆ ಆಘಾತವಾಗುತ್ತದೆ’ ಎಂದರು.
 
‘ದೇಶ ಆರ್ಥಿಕವಾಗಿ ಮುಂದುವರಿಯುತ್ತಿದೆ. ಆದರೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 120ನೇ ರ್‌್ಯಾಂಕ್‌ನಲ್ಲಿದೆ. ಮಾನವ ಅಭಿವೃದ್ಧಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಈ ಅರಿವು ಮೂಡಿಸುವಲ್ಲಿ ಮಾಧ್ಯಮ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಅವರು ತಿಳಿಸಿದರು.
 
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಆನಂದ ಲೋಬೋ, ಸ್ಪಂದನ ಸಂಸ್ಥೆಯ ಸುಶೀಲಾ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಡಿಸಿಪಿಒ ಎ.ಎಸ್‌. ಮರಿಕಟ್ಟಿ, ಹಿರಿಯ ಪತ್ರಕರ್ತ ಸತೀಶ ಚಪ್ಪರಿಕೆ ಭಾಗವಹಿಸಿದ್ದರು.
 
ನಂತರ ಯುನಿಸೆಫ್‌ ಮಕ್ಕಳ ರಕ್ಷಣಾ ಯೋಜನೆ–ಕೊಪ್ಪಳ ಪ್ರಾದೇಶಿಕ ಸಂಯೋಜಕ ಕೆ. ರಾಘವೇಂದ್ರ ಭಟ್‌ ಹಾಗೂ ಬೆಂಗಳೂರಿನ ಚೈಲ್ಡ್‌ ರೈಟ್ಸ್ ಟ್ರಸ್ಟ್‌ ನಿರ್ದೇಶಕ ವಾಸುದೇವಶರ್ಮ ಮಕ್ಕಳ ಹಕ್ಕುಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
***
ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುವುದು ಹೋಗಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಹೀಗಾಗಿ, ಅವರ ಹಕ್ಕುಗಳನ್ನು ಗೌರವಿಸಬೇಕು
ಉಷಾ  ಸಹಾಯಕ ನಿರ್ದೇಶಕಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.