ADVERTISEMENT

ಬೀದಿ ನಾಯಿ ಹಾವಳಿ: ಬೆಚ್ಚಿ ಬಿದ್ದ ಜನ

ಸಾರ್ವಜನಿಕರಲ್ಲಿ ಆತಂಕ, ಕಡಿವಾಣ ಹಾಕುವಲ್ಲಿ ಮಹಾನಗರಪಾಲಿಕೆ ವಿಫಲ; ವಾಹನ ಸಂಚಾರಕ್ಕೂ ತೊಡಕು

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:39 IST
Last Updated 9 ಜನವರಿ 2017, 8:39 IST
-ಆರ್‌.ಎಲ್‌. ಚಿಕ್ಕಮಠ
 
*
ಬೆಳಗಾವಿ:  ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
 
ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಅಲ್ಲಲ್ಲಿ ತಂಡಗಳಾಗಿ ಕಾಣಿಸಿಕೊಳ್ಳುವ ನಾಯಿಗಳು ಸುಮ್ಮನೆ ರಸ್ತೆಯಲ್ಲಿ ಹೋಗುವವರ ಬೆನ್ನತ್ತಿ ಕಚ್ಚುವುದು, ವಾಹನ ಸವಾರರನ್ನು ಓಡಿಸಿಕೊಂಡು ಹೋಗುವುದು ಕಂಡು ಬರುತ್ತಿದೆ. ಎಲ್ಲೆಂದರಲ್ಲಿ ಓಡಾಡುವ ನಾಯಿಗಳನ್ನು ಕಂಡೊಡನೆ ಅಲ್ಲಿ ಸಂಚರಿಸುವುದಕ್ಕೂ ಭಯ ಪಡುವಂತಾಗಿದೆ. ಚಳಿಗೆ ಬೀದಿನಾಯಿಗಳು ನಡುಗಿ ನರಳುತ್ತಿದ್ದರೆ, ಬೊಗಳುತ್ತಿದ್ದರೆ ನೆರೆ ಮನೆಗಳ ನಿವಾಸಿಗಳಿಗೆ ಜಾಗರಣೆ ತಪ್ಪಿದ್ದಲ್ಲ. 
 
ಚಳಿಯಿಂದ ರಕ್ಷಣೆಗಾಗಿ ಸ್ವೆಟರ್‌ ಸಮೇತ ಮೈತುಂಬ ಬಟ್ಟೆ ಧರಿಸಿ ಸಂಚರಿಸಿದರೆ, ತಲೆ ಮೇಲೆ ಕ್ಯಾಪ್‌ ಧರಿಸಿದ್ದರೆ, ಸ್ಕಾರ್ಪ್‌ ಸುತ್ತಿದ್ದರೆ, ಬೂಟು ಧರಿಸಿ ಸಪ್ಪಳವಾಗುವಂತೆ ನಡೆದರೆ, ವಾಹನಗಳ ಮೇಲೆ ಸಂಚರಿಸಿದರೆ ಬೀದಿ ನಾಯಿಗಳು ಬೆನ್ನು ಹತ್ತುತ್ತವೆ. ಓಡಿಸಿಕೊಂಡು ಬಂದು ಕಚ್ಚುತ್ತವೆ. ಸಂಜೆಯಾದೊಡನೆ ಬೀದಿಗೆ ಬರುವ ನಾಯಿಗಳ ಹಾವಳಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ.
 
‘ನಗರದ ಬಹುತೇಕ ಕಡೆಗಳಲ್ಲಿ ಈಗ ಬೀದಿ ನಾಯಿಗಳದ್ದೇ ದರ್ಬಾರು. ನಾಯಿಗಳೆಂದು ಹೀಗಳೆದು ಮೈಮರೆತು ಸಂಚರಿಸಿದರೆ ಅಪಾಯ ತಪ್ಪಿದ್ದಲ್ಲ. ಕೆಲಸ ಮುಗಿಸಿ ಗಡಿಬಿಡಿಯಿಂದ ಮನೆ ಸೇರಿ ಚಳಿಯಿಂದ ಪಾರಾಗಬೇಕು ಎಂಬ ಒತ್ತಡದಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ನಾಲ್ಕಾರು ನಾಯಿಗಳು ಓಡಿಸಿಕೊಂಡು ಬಂದವು. ತಪ್ಪಿಸಿಕೊಳ್ಳಲು ಎಷ್ಟೇ ಪರದಾಡಿದರೂ ಪ್ರಯೋಜನವಾಗಲಿಲ್ಲ. ಬೈಕ್‌ ಮುಂದೆ ಬಂದ ಒಂದು ನಾಯಿ ಗಾಲಿಗೆ ತಾಗಿಯೇ ಬಿಟ್ಟಿತು. ಆಗ ಬೈಕ್‌ ಸಮೇತ ನೆಲಕ್ಕೆ ಉರುಳಿ ಬಿದ್ದು ಗಾಯ ಮಾಡಿಕೊಂಡೆ’ ಎಂದು ನಗರದ ತಾನಾಜಿ ಗಲ್ಲಿಯ ನಿವಾಸಿ ಗಜಾನನ ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.
 
ಬೀದಿ ನಾಯಿಗಳಿಗೆ ಸುಗ್ಗಿ: ನಗರದ ಹಲವು ಬೀದಿಗಳಲ್ಲಿ ಚಿಕನ್‌ –ಮಟನ್‌ ಅಂಗಡಿಗಳು, ಬಿರಿಯಾನಿ ಮಾರುವ ಕೈಗಾಡಿಗಳು, ಹಾದಿ ಬೀದಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ, ಅಲ್ಲಿ ಆಹಾರ ಹುಡುಕಿಕೊಂಡು ನಾಯಿಗಳ ಹಿಂಡು ಬರುತ್ತವೆ. ತ್ಯಾಜ್ಯದ ಗುಂಡಿಗಳು ತುಂಬಿಕೊಂಡು ಕೊಳೆತು ನಾರುತ್ತಿವೆ. ಇಂಥ ಗುಂಡಿಗಳೇ ಬೀದಿ ನಾಯಿಗಳಿಗೆ ಸ್ವರ್ಗ ಎನಿಸಿವೆ. ಒಂದು ತ್ಯಾಜ್ಯದ ಗುಂಡಿಗೆ ಹತ್ತಾರು ನಾಯಿಗಳು ಮುತ್ತಿಕೊಂಡು, ಆಹಾರಕ್ಕಾಗಿ ಪೈಪೋಟಿ ನಡೆಸುತ್ತವೆ. ಬೀದಿಯಲ್ಲಿಯೇ ನಾಯಿಗಳ ಜಗಳವೇ ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಅಲ್ಲಿ ಸಂಚರಿಸುವವರು ಆತಂಕದಿಂದಲೇ ಮುಂದೆ ಸಾಗಬೇಕಾದ ಸ್ಥಿತಿ ಇದೆ.
 
ಜಿಲ್ಲಾಧಿಕಾರಿ ಕಚೇರಿ ಆವರಣದ ಸಮೀಪ, ನ್ಯಾಯಾಲಯ ಸಂಕೀರ್ಣ, ಗಾಂಧಿನಗರ, ಬಸ್‌ ನಿಲ್ದಾಣದ ಸುತ್ತ, ತರಕಾರಿ ಮಾರುಕಟ್ಟೆ ಬಳಿ, ಆರ್‌ಟಿಒ ಕಚೇರಿ, ನೆಹರೂ ನಗರ, ಶಾಹುನಗರ, ಚನ್ನಮ್ಮ ವೃತ್ತ, ಬೋಗಾರವೇಸ್‌, ಶಿವಾಜಿ ಗಲ್ಲಿ, ರೇಲ್ವೆ ನಿಲ್ದಾಣ ಬಳಿ, ಹೊರವಲಯದ ಪೀರನವಾಡಿ, ಸಾಂಬ್ರಾ, ಹಿಂಡಲಗಾದಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. 
 
ಬೀದಿ ನಾಯಿಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕುವಲ್ಲಿ ಮಹಾನಗರ ಪಾಲಿಕೆಯು ವಿಫಲವಾಗಿದೆ. ಇದರಿಂದ, ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
 
***
ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಗುತ್ತಿಗೆ
ಬೆಳಗಾವಿಯಲ್ಲಿ ಬೀದಿನಾಯಿಗಳ ಹಾವಳಿ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಅದನ್ನು ತಡೆಯಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ನಾಯಿ ಕೊಲ್ಲುವ ಅಧಿಕಾರ ನಮಗಿಲ್ಲ. ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಉದ್ದೇಶಿಸಿ ನಾಲ್ಕು ಸಲ ಟೆಂಡರ್‌ ಕರೆದರೂ ಯಾರೂ ಅರ್ಜಿ ಹಾಕಿಲ್ಲ ಎಂದು ಮಹಾನಗರಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.
 
‘ಕೊನೆಗೆ ಒಂದು ಸಂಘಟನೆಯವರನ್ನು ಕರೆದು ಈ ಕೆಲಸ ಕೊಡಲಾಗಿದೆ. ಅದು ಫೆಬ್ರುವರಿಯಿಂದ ತನ್ನ ಕೆಲಸ ಆರಂಭಿಸಲಿದೆ. ಅದಕ್ಕೆ ಪ್ರತಿ ಬೀದಿ ನಾಯಿಯ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ತಲಾ ₹ 705 ನಿಗದಿಪಡಿಸಿ ಗುತ್ತಿಗೆ ಕೊಡಲಾಗಿದೆ. ಎಲ್ಲೆಲ್ಲಿ ನಾಯಿಗಳ ಹಾವಳಿ ಇದೆ, ಅಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಸಾರ್ವಜನಿಕರು ಮಾಹಿತಿ ನೀಡಿದರೆ ಅಲ್ಲಿಗೆ ಈ ತಂಡ ಬರಲಿದೆ’ ಎಂದು ಅವರು ಹೇಳಿದರು.
 
***
ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗಿದೆ. ಈ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯ ಫೆಬ್ರುವರಿಯಿಂದ ಪ್ರಾರಂಭವಾಗಲಿದೆ.
-ಶಶಿಧರ ಕುರೇರ
ಆಯುಕ್ತರು, ಮಹಾನಗರಪಾಲಿಕೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.