ADVERTISEMENT

ಬೂದಿ ಮುಚ್ಚಿದ ಕೆಂಡವಾದ ಬೆಳಗಾವಿ

ಶ್ರೀಕಾಂತ ಕಲ್ಲಮ್ಮನವರ
Published 17 ನವೆಂಬರ್ 2017, 8:52 IST
Last Updated 17 ನವೆಂಬರ್ 2017, 8:52 IST

ಬೆಳಗಾವಿ: ಹಿಂದೂ ಮುಸ್ಲಿಂ ಘರ್ಷಣೆ ಯಿಂದ ನಲುಗಿದ ಚವಾಟ್‌ ಗಲ್ಲಿ, ಭಡಕಲ್‌ ಗಲ್ಲಿ, ಖಂಜರ್‌ ಗಲ್ಲಿ, ಜಾಲಗಾರ ಗಲ್ಲಿ, ಘೀ ಗಲ್ಲಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಮೇಲ್ನೋಟಕ್ಕೆ ಶಾಂತಿ ನೆಲೆಸಿರುವುದು ಕಂಡುಬಂದಿದ್ದರೂ, ಬೂದಿಮುಚ್ಚಿದ ಕೆಂಡದಂತಹ ಸ್ಥಿತಿ ನಿರ್ಮಾಣವಾಗಿತ್ತು.

ಆ ಕಡೆಯಿಂದ ಕಲ್ಲು ಬಂತು..: ‘ರಾತ್ರಿ 10 ಗಂಟೆ ಸುಮಾರಿಗೆ ಊಟ ಮಾಡಿ ಮನೆಯಿಂದ ಹೊರಗೆ ಬಂದು ನಿಂತಿದ್ದೆ. ಆಗ ‍ಪಕ್ಕದ ಘೀ ಗಲ್ಲಿ ಕಡೆಯಿಂದ ಕಲ್ಲು– ಬಾಟಲಿಗಳು ತೂರಿ ಬಂದವು. 50–60 ಜನರು ಅನತಿ ದೂರದಲ್ಲಿ ನಿಂತು ಕಲ್ಲು–ಬಾಟಲಿ ಬೀಸುತ್ತಿದ್ದರು. ಅಲ್ಲಿಯೇ ಬೀಡುಬಿಟ್ಟಿದ್ದ ಪೊಲೀಸರು ಏನೂ ಆಗಿಲ್ಲವೆನ್ನುವಂತೆ ಕೈಕಟ್ಟಿ ಕುಳಿತಿದ್ದರು’ ಎಂದು ಅಮೋಲ್‌ ಜಾಧವ್‌ ‘ಪ್ರಜಾವಾಣಿ’ಗೆ ಹೇಳಿದರು.

‘ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಲು ಹೋದೆ ಆಗ, ಪೊಲೀಸರು ನನ್ನ ಮೇಲೆಯೇ ಲಾಠಿ ಬೀಸಿದರು’ ಎಂದು ತಮ್ಮ ಬೆನ್ನಿನ ಮೇಲೆ ಮೂಡಿದ ಬಾಸುಂಡೆಯ ಗುರುತನ್ನು ತೋರಿಸಿದರು.

ADVERTISEMENT

ಯುವತಿಯ ಮೇಲೆ ಲಾಠಿ ಪ್ರಹಾರ: ‘ನಮ್ಮ ಮನೆಗಳ ಮೇಲೆ ಕಲ್ಲುಗಳು ಬೀಳಲು ಶುರುವಾದವು. ಇದನ್ನು ಪ್ರತಿಭಟಿಸಿ ನಾವು ರಸ್ತೆಗೆ ಬಂದೇವು. ಸಮೀಪದಲ್ಲಿಯೇ ಇದ್ದ ಎಸಿಪಿ ದರ್ಜೆಯ ಪೊಲೀಸ್‌ ಅಧಿಕಾರಿಯೊಬ್ಬರು ನನ್ನನ್ನು ತಳ್ಳಿ, ಲಾಠಿ ಬೀಸಿದರು. ಪುರುಷ ಅಧಿಕಾರಿಯೊಬ್ಬ ಮಹಿಳೆಯರ ಮೇಲೆ ಕೈ ಮಾಡಬಹುದೇ’ ಎಂದು ಮಿಥಾಲಿ ಮಾಂಗಟೆಕರ್‌ ಪ್ರಶ್ನಿಸಿದರು. ತಮ್ಮ ಭುಜಕ್ಕೆ ಉಂಟಾದ ಗಾಯವನ್ನು ತೋರಿಸಿದರು.

‘ಹೆಣ್ಣು ಮಕ್ಕಳು, ಮುದುಕರು, ಮಕ್ಕಳು ಎನ್ನದೇ ಪೊಲೀಸರು ಲಾಠಿ ಬೀಸಿದರು. ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಮಾಡದೇ ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಘಟನೆಯಿಂದ ಹೆದರಿರುವ ಯುವಕರು– ಪುರುಷರು ಮನೆ ಬಿಟ್ಟು ಹೋಗಿದ್ದಾರೆ. ನಮಗೆ ರಕ್ಷಣೆ ನೀಡು ವವರು ಯಾರು? ನಾವು ಯಾರನ್ನು ನಂಬಿಕೂರಬೇಕು’ ಎಂದು ಪ್ರಶ್ನಿಸಿದರು.

ನಮ್ಮನ್ನೇ ಟಾರ್ಗೆಟ್‌ ಏಕೆ?: ‘ನಗರದ ಬೇರಾವ ಪ್ರದೇಶದಲ್ಲೂ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುವುದಿಲ್ಲ. ಆದರೆ, ಈ ಪ್ರದೇಶದಲ್ಲಿ ವಾಸಿಸುವ ನಮ್ಮನ್ನೇ ಏಕೆ ಟಾರ್ಗೆಟ್‌ ಮಾಡಲಾಗು ತ್ತಿದೆ? ಈ ರೀತಿ ಕಲ್ಲು ತೂರಾಟ ನಡೆದಿರುವುದು ಇದೇ ಮೊದಲೇನಲ್ಲ. ಹೋಳಿ ಹಬ್ಬ ಇರಲಿ, ಗಣೇಶ ಚತುರ್ಥಿ ಇರಲಿ, ನಮ್ಮ ಮನೆಗಳ ಮೇಲೆ ಕಲ್ಲು ಬೀಳುವುದು ಗ್ಯಾರಂಟಿ’ ಎಂದರು.

ನಾವು ಕೋಲ್ಹಾಪುರದವರು...: ‘ನಾವು ಕೋಲ್ಹಾಪುರದವರು. ಇಲ್ಲಿ ನಮ್ಮ ಸಂಬಂಧಿಕರ ಮನೆಗೆ ಬಂದಿದ್ದೇವು. ಬೆಳಿಗ್ಗೆ ನನ್ನ ಪತಿ ಸುಶಾಂತ ಪಾಟೋಳೆ ದಿನಪತ್ರಿಕೆ ತರಲು ಹೋಗಿದ್ದರು. ಅವರನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಅವರನ್ನು ಎಲ್ಲಿ ಇಟ್ಟಿದ್ದಾರೆಯೋ ಗೊತ್ತಿಲ್ಲ. ಮಾರ್ಕೆಟ್‌ ಠಾಣೆ, ಎಪಿಎಂಸಿ ಠಾಣೆ ಅಲೆದು ಅಲೆದು ಸುಸ್ತಾಗಿದೆ. ಯಾರೊಬ್ಬರೂ ಅವರನ್ನು ತೋರಿಸುತ್ತಿಲ್ಲ’ ಎಂದು ಪತ್ನಿ ಸುಷ್ಮಾ ಕಣ್ಣೀರು ಹಾಕಿದರು.

‘ನನ್ನ ಜೊತೆ ವಯಸ್ಸಾದ ಮಾವ ನವರು ಕೂಡ ಠಾಣೆಯಿಂದ ಠಾಣೆಗೆ ಅಲೆದಾಡುತ್ತಿದ್ದಾರೆ. ಇವರ ವಯಸ್ಸಿಗೂ ಪೊಲೀಸರ ಮನಸ್ಸು ಕರಗುತ್ತಿಲ್ಲ. ಇನ್ನೆಂದೂ ಈ ಊರಿನ ಕಡೆ ತಲೆ ಹಾಕದಂತಾಗಿದೆ’ ಎಂದರು.

ಜನಪ್ರತಿನಿಧಿಗಳ ಪ್ರಭಾವ– ಆರೋಪ: ‘ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಿಟ್ಟು, ಅಮಾಯಕ ಹಿಂದೂ ಯುವಕರನ್ನು ಪೊಲೀಸರು ಕರೆದೊಯ್ದಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಇಂತಹ ಕೆಲಸ ಮಾಡುತ್ತಿ ದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಆರೋಪಿಸಿದರು.

‘ಅಮಾಯಕ ಹಿಂದೂಗಳನ್ನು ಹಿಡಿದುಕೊಂಡು ಹೋಗಿರುವ ಪೊಲೀಸರು ತಕ್ಷಣ ಬಿಡುಗಡೆಗೊಳಿಸ ಬೇಕು. ಇಲ್ಲದಿದ್ದರೆ ಠಾಣೆಗಳ ಮುಂದೆ ಧರಣಿ ಕೂರುತ್ತೇವೆ. ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.