ADVERTISEMENT

ಬೆರಗು ಮೂಡಿಸುವ ಗಂಗಾರಾಮ್ ಚಿತ್ರಗಳು!

ಸುಧಾಕರ ಎಸ್.ತಳವಾರ, ಬೆಂಗಳೂರು
Published 17 ಡಿಸೆಂಬರ್ 2017, 7:05 IST
Last Updated 17 ಡಿಸೆಂಬರ್ 2017, 7:05 IST
ಗೋಡೆ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಬಿಡಿಸುತ್ತಿರುವ ಗಂಗಾರಾಮ್
ಗೋಡೆ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಬಿಡಿಸುತ್ತಿರುವ ಗಂಗಾರಾಮ್   

ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಕಲೆ ಅಡಗಿರುತ್ತದೆ. ಆದರೆ, ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡಿದರೆ ಆ ಮಗು ಭವಿಷ್ಯದಲ್ಲಿ ಪ್ರತಿಭಾನ್ವಿತ ಪ್ರತಿಭೆಯಾಗಿ ಬೆಳೆಯಲು ಸಾಧ್ಯ.

ಚಿಕ್ಕೋಡಿ ತಾಲ್ಲೂಕಿನಲ್ಲಿ ‘ಉತ್ತಮ ಪೆಂಟರ್’ ಎಂದೇ ಕರೆಸಿಕೊಳ್ಳುವ ಬೇಡಕಿಹಾಳ ಗ್ರಾಮದ ಗಂಗಾರಾಮ್ ಜಿತೇಂದ್ರ ಶಿಂಗಾಡೆ ಚಿತ್ರಕಲೆಯಲ್ಲಿ ಯಾವುದೇ ರೀತಿಯ ತರಬೇತಿಯನ್ನು ಪಡೆಯದೇ ಪ್ರಯೋಗಾತ್ಮಕವಾಗಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಅದ್ಬುತ ಪ್ರತಿಭೆಯಾಗಿದ್ದಾರೆ.

ಬೇಡಕಿಹಾಳ ಗ್ರಾಮದ ಗಂಗಾರಾಮ್ ಜಿತೇಂದ್ರ ಶಿಂಗಾಡೆ ಓದಿದ್ದು ದ್ವಿತೀಯ ಪಿಯುಸಿ. ಅದೂ ಮರಾಠಿ ಮಾಧ್ಯಮದಲ್ಲಿ. ಆದರೂ, ಅವರು ಕನ್ನಡ, ಹಿಂದಿ, ಉರ್ದು ಹಾಗೂ ಇಂಗ್ಲೀಷ್‌ ಅಕ್ಷರಗಳನ್ನು ಪೆಂಟಿಂಗ್‌ನಲ್ಲಿ ಮುತ್ತಿನಂತೆ ಬರೆಯಬಲ್ಲರು.

ADVERTISEMENT

ನಾಲ್ಕನೇ ತರಗತಿಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಗಂಗಾರಾಮ್, ಬಡತನದ ಕಾರಣಕ್ಕಾಗಿ ದ್ವಿತೀಯ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿದರು. ಆದರೂ, ಏಕಲವ್ಯನಂತೆಯೇ ತಮ್ಮ ಆಸಕ್ತಿಯ ಚಿತ್ರಕಲೆಯಲ್ಲಿಯೇ ಇನ್ನಷ್ಟು ಪ್ರಯೋಗಶೀಲತೆಯನ್ನು ಮಾಡಿ, ಚಿತ್ರಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಇಂದು ಚಿಕ್ಕೋಡಿ ಪರಿಸರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.

ಗಂಗಾರಾಮ್ ಅವರು ಎರಡು ದಶಕದಿಂದ ಸರ್ಕಾರಿ ಶಾಲೆ, ಕಾಲೇಜುಗಳು, ಸಂಘಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು ಸೇರಿದಂತೆ ವಿವಿಧ ಕಟ್ಟಡಗಳ ಗೋಡೆಗಳ ಮೇಲೆ ಚಿತ್ರ, ಬರಹ, ಮಾಹಿತಿಯುಕ್ತ ಸಂದೇಶಗಳನ್ನು ಅತ್ಯಾಕರ್ಷಕವಾಗಿ ಬಿಡಿಸುವ ವೃತ್ತಿಯಲ್ಲಿ ತೊಡಗಿದ್ದಾರೆ. ಯಾವುದೇ ರೀತಿಯ ಚಿತ್ರಕಲಾ ತರಬೇತಿಯನ್ನೂ ಪಡೆಯದೇ
ವ್ಯಕ್ತಿಗಳ ಚಿತ್ರವನ್ನು ಜೀವಂತವನ್ನಾಗಿಸಿ ಬಿಡಿಸುವ ಕಲೆ ಇವರಲ್ಲಿ ಕರಗತವಾಗಿದೆ.

ಕೇವಲ ಕ್ಯಾನವಾಸ್‌, ಗೋಡೆಗಳ ಮೇಲಷ್ಟೇ ಅಲ್ಲ. ಕಲ್ಲು ಬಂಡೆಗಳ ಮೇಲೆಯೂ ಅತ್ಯಾಕರ್ಷಕವಾದ ಚಿತ್ರಗಳನ್ನು ಬಿಡಿಸಿಬಲ್ಲರು. ಗಂಗಾರಾಮ್ ಅವರ ಎದುರಿಗೆ ಯಾವುದೇ ರೀತಿಯ ಚಿತ್ರವನ್ನು ಇಟ್ಟರೂ, ಅದನ್ನು ಯಥಾವತ್ತಾಗಿ ರಂಗಗಳಲ್ಲಿ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

‘ಪ್ರಾಥಮಿಕ ಶಿಕ್ಷಣ ಹಂತದಿಂದಲೂ ಚಿತ್ರಕಲೆ ಬಗೆಗೆ ಆಸಕ್ತಿ ಹೊಂದಿದ್ದೆ. ಆದರೆ, ಚಿತ್ರಕಲೆ ಬಗೆಗೆ ತರಬೇತಿ ಪಡೆಯಲು ಆಗಲಿಲ್ಲ. ಆದರೂ,ಆಸಕ್ತಿ ಚಿತ್ರಕಲೆಯಲ್ಲಿಯೇ ಶೃದ್ಧೆಯಿಂದ ದುಡಿದ ಪರಿಣಾಮವಾಗಿ ಚಿತ್ರಕಲೆ ಇಂದು ನನ್ನ ಕೈಹಿಡಿದಿದೆ’ ಎನ್ನುತ್ತಾರೆ ಗಂಗಾರಾಮ್.

‘ಇಂದಿನ ಡಿಜಿಟಿಲ್ ಯುಗದಲ್ಲಿ ನೈಜ ಕಲಾವಿದರ ಕಲೆಗೆ ಬೇಡಿಕೆ ಸಿಗುತ್ತಿಲ್ಲ. ಇದರಿಂದಾಗಿ ಅನೇಕ ಕಲಾವಿದರು ಈ ಕಲೆಯನ್ನು ಕಡೆಗಣಿಸಿ ಅನ್ಯ ಉದ್ಯೋಗದತ್ತ ವಾಲುತ್ತಿದ್ದಾರೆ’ ಎಂದು ಗಂಗಾರಾಮ್ ಶಿಂಗಾಡೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

* * 

ಡಿಜಿಟಲ್ ಕಲೆಗಿಂತ ಚಿತ್ರಕಲೆ ಶಾಶ್ವತವಾಗಿದೆ. ಸರ್ಕಾರ ಚಿತ್ರ ಕಲಾವಿದರ ಪ್ರತಿಭೆಯನ್ನು ಪರಿಗಣಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು
ಗಂಗಾರಾಮ್ ಶಿಂಗಾಡೆ
ಚಿತ್ರ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.