ADVERTISEMENT

ಭಕ್ತಿ, ಭಂಡಾರದಲ್ಲಿ ಮಿಂದೆದ್ದ ಜನ

ಸಂಭ್ರಮದ ಹತ್ತರಗಿ– ದಾದಬಾನಹಟ್ಟಿ ಮಹಾಲಕ್ಷ್ಮೀ ದೇವಿ ರಥೋತ್ಸವ; ಜನಪದ ಕಲೆಗಳ ವಿಶೇಷ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 12:05 IST
Last Updated 16 ಫೆಬ್ರುವರಿ 2017, 12:05 IST
ಯಮಕನಮರಡಿ: ಇಲ್ಲಿಗೆ ಸಮೀಪದ ಹತ್ತರಗಿ- ದಾದಬಾನಹಟ್ಟಿಯ ಗ್ರಾಮದೇವತೆ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ಅದ್ಧೂರಿ ಚಾಲನೆ ನೀಡಲಾಯಿತು.
 
ಮಂಗಳವಾರ ರಾತ್ರಿ ಹತ್ತರಗಿ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಚೇರಿ ಬಳಿ ಬೆಳ್ಳಿ ರಥದಲ್ಲಿ ಲಕ್ಷ್ಮೀ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಲಾಯಿತು. ಮೆರವಣಿಗೆ ಮೂಲಕ ರಥದವರೆಗೆ ತಂದು ಪ್ರತಿಷ್ಠಾಪಿಸಲಾಯಿತು.  
 
ವಿಧಿವಿಧಾನಗಳ ಪ್ರಕಾರ ಬೆಳ್ಳಿ ರಥದ ಮುಂದಿನ ಜೋಡು ಕುದುರೆಗಳ ಬಳಿ ಕರ್ಪೂರ ಬೆಳಗಿ ತೆಂಗಿನಕಾಯಿ ಒಡೆಯುವ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪಟೋಳಿ, ಸಿದ್ದಣ್ಣ ಹಾಲದೇವರಮಠ ಮೆರವಣಿಗೆ ಚಾಲನೆ ನೀಡಿದರು. ಡೊಳ್ಳು ಸೇರಿದಂತೆ ವಿವಿಧ ವಾದ್ಯ ಮೇಳಗಳ ಸಮ್ಮುಖದಲ್ಲಿ ಸಾವಿರಾರು ಯುವಕರು ಲಕ್ಷ್ಮೀದೇವಿಗೆ ಜಯಕಾರ ಹಾಕುತ್ತಾ ಭಂಡಾರದಲ್ಲಿ ಮಿಂದೆದ್ದರು. 
 
ವಿವಿಧ ಮದ್ದು, ಗುಂಡು ಹಾರಿಸಿ ಜನರ ಮನಸೆಳೆಯಲಾಯಿತು. ಮೆರವಣಿಗೆಯು ಗ್ರಾಮ ಪಂಚಾಯ್ತಿಯಿಂದ ಆರಂಭಗೊಂಡು ತೇರಣಿ ಕಾಲೊನಿ, ಕುಡಚಿ ಕಾಲೊನಿ ಮೂಲಕ ಹಾಯ್ದು ಗುಡಿಯ ಹತ್ತಿರ ತೆರಳಿ ಬುಧವಾರ ಬೆಳಿಗ್ಗೆ ಮರು ಪ್ರತಿಷ್ಠಾಪನೆ ಮಾಡಲಾಯಿತು. 
 
ದಾದಬಾನಹಟ್ಟಿ ಗ್ರಾಮದ ಲಕ್ಷ್ಮೀ ದೇವಿ ಮೂರ್ತಿಯನ್ನು ಯಮಕನಮರಡಿ ಬಡಿಗೇರ ಕಾಲೊನಿಯಿಂದ ಪಲ್ಲಕ್ಕಿಗೆ ಕೂಡಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಬಜಾರ ಪೇಟೆ, ಗ್ರಾಮ ಪಂಚಾಯ್ತಿ ಕಚೇರಿ ಮೂಲಕ ಹಾಯ್ದು ಮುಖ್ಯ ರಸ್ತೆಯಲ್ಲಿ ಭಕ್ತಿ, ಸಡಗರದಿಂದ ಆರಿಸಲಾಯಿತು. ಮೆರವಣಿಯಲ್ಲಿ ಐದು ಗ್ರಾಮದ ಜನತೆ ಹಾಗೂ ಸುತ್ತಲಿನ ಗ್ರಾಮದ ಜನರು ಪಾಲ್ಲೊಂಡಿದ್ದರು.
 
ಹತ್ತರಗಿ-ದಾದಬಾನಹಟ್ಟಿ ಗ್ರಾಮದ ಮನೆಗಳು ಸುಣ್ಣ ಬಣ್ಣದಿಂದ ಅಲಂಕೃತಗೊಂಡಿದ್ದವು. ಮನೆಗಳಿಗೆ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು. ಮಾವಿನ ತೋರಣ ಕಟ್ಟಿ, ಅಂಗಳದಲ್ಲಿ ರಂಗೋಲಿ ಬಿಡಿಸಿ ಸ್ವಚ್ಛಗೊಳಿಸಲಾಗಿತ್ತು. ಭಕ್ತಿಯ ವಾತಾವರಣ ನೆಲೆಯಾಗಿತ್ತು. ಗ್ರಾಮದ ಮುಖ್ಯದ್ವಾರದಲ್ಲಿ ಕಮಿಟಿಯ ಸ್ವಾಗತ ಕಮಾನಗಳು ರಾರಾಜಿಸುತ್ತಿದ್ದವು. ರಾಜಕೀಯ ಮುಖಂಡರ ಬ್ಯಾನರಗಳು ಕಾಣುತ್ತಿದ್ದವು. 
 
* ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ರಾಜ್ಯದಿಂದಲೂ ಭಕ್ತರು ಬಂದು, ದೇವಿಗೆ ಭಕ್ತಿ ಸಮರ್ಪಿಸುವರು. ಇದು ಬಾಂಧವ್ಯ ಬೆಸುಗೆಯ ಜಾತ್ರೆ
ಲಗಮಪ್ಪ ಬೆಳವಡಿ, ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.