ADVERTISEMENT

ಭೂತಾಯಿ ಒಡಲು ಬಗೆಯುವುದಕ್ಕಿಲ್ಲ ಕಡಿವಾಣ!

ಎಂ.ಮಹೇಶ
Published 22 ಮಾರ್ಚ್ 2017, 7:55 IST
Last Updated 22 ಮಾರ್ಚ್ 2017, 7:55 IST

ಬೆಳಗಾವಿ: ಜಿಲ್ಲೆಯಲ್ಲಿ ಕುಡಿಯುವ ಉದ್ದೇಶ ಹಾಗೂ ಕೃಷಿಗಾಗಿ ಕೊರೆದಿ­ರುವ ಕೊಳವೆಬಾವಿಗಳ ಸಂಖ್ಯೆ ಎಷ್ಟು ಎನ್ನುವ ನಿಖರ ಮಾಹಿತಿ ಜಿಲ್ಲಾಡಳಿತದ ಬಳಿಯಾಗಲೀ, ಸಂಬಂಧಿಸಿದ ಇಲಾಖೆ­ಗಳಲ್ಲಾಗಲಿ ಇಲ್ಲ!

ಅಂತರ್ಜಲ ಅತಿಬಳಕೆಯ ಪ್ರದೇಶ­ದ­ಲ್ಲಷ್ಟೇ ಕೊಳವೆಬಾವಿ ಕೊರೆಯುವು­ದಕ್ಕೆ ಅನುಮತಿ ಪಡೆಯುವುದನ್ನು ಕಡ್ಡಾಯ­ಗೊಳಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ಭೂತಾಯಿಯ ಒಡಲು ಬಗೆಯುವುದಕ್ಕೆ ಯಾವುದೇ ನಿರ್ಬಂಧ­ವಿಲ್ಲದೆ, ಎಗ್ಗಿಲ್ಲದೇ ಸಾಗುತ್ತಿದೆ.

ಜಿಲ್ಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದಲ್ಲಿ ಒಟ್ಟು 1255 ಜನ­ವಸತಿಗಳಿವೆ. ಜನವಸತಿ ಹಾಗೂ ಜನ­ವಸತಿರಹಿತ ಪ್ರದೇಶಗಳಲ್ಲಿ ಅಂದಾ­ಜಿನ ಪ್ರಕಾರ 2,55,610 ಹೆಚ್ಚು ಕೊಳವೆ­ಬಾವಿಗಳಿವೆ. ಸರ್ಕಾರದ ವಿವಿಧ ಇಲಾಖೆಗಳಿಂದ ಕೊರೆದಿರುವ ಕೊಳವೆ­ಬಾವಿಗಳ ಸಂಖ್ಯೆ 14654ಕ್ಕೂ ಹೆಚ್ಚು. ಉಳಿದವು ಖಾಸಗಿಯವು.

ಹೆಸ್ಕಾಂ­ನವರು ವಿದ್ಯುತ್‌ ಸಂಪರ್ಕ ನೀಡಿರುವ ಕೊಳವೆಬಾವಿಗಳು (ಐಪಿಸೆಟ್‌ಗಳು) ಮಾತ್ರ ಲೆಕ್ಕಕ್ಕೆ ಸಿಗುವಂಥವು. ಅನಧಿಕೃತ­ವಾಗಿ ವಿದ್ಯುತ್‌ ಸಂಪರ್ಕ ಪಡೆದು­ಕೊಳ್ಳಲು ಕೊಳವೆಬಾವಿಗಳು ಲೆಕ್ಕಕ್ಕಿಲ್ಲ!

ಕುಡಿಯುವ ನೀರು ಪೂರೈಕೆಗಾಗಿ ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಕುಡಿ­ಯುವ ನೀರು ಹಾಗೂ ನೈರ್ಮಲ್ಯ ಇಲಾಖೆ­ಯಿಂದ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಇದಲ್ಲದೇ, ಖಾಸ­ಗಿಯವರು ಅವರವರ ಮನೆ, ಜಮೀನು ಹಾಗೂ ತೋಟಗಳಲ್ಲಿ ಕೊಳವೆಬಾವಿ ಕೊರೆಸಿಕೊಳ್ಳುವುದು ಕಂಡುಬರುತ್ತದೆ.

ಈಚಿನ ದಿನಗಳಲ್ಲಿ ಅನಧಿಕೃತ ಕೊಳವೆ­ಬಾವಿಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ ಉದಾಹರಣೆಯೇ ಕಂಡುಬಂದಿಲ್ಲ! ಸಂಬಂಧಿಸಿದ ಇಲಾಖೆಗಳ ಈ ನಿರ್ಲಕ್ಷ್ಯದ ಪರಿಣಾಮ, ಕೊಳವೆಬಾವಿ ಕೊರೆ­ಯುವವರಿಗೆ ಕಡಿವಾಣವೇ ಇಲ್ಲದಂತಾಗಿದೆ.

ಕೆಲ ತಾಲ್ಲೂಕಲ್ಲಷ್ಟೇ ನಿರ್ಬಂಧ: ಜಿಲ್ಲೆಯ ಅಥಣಿ, ಬೈಲಹೊಂಗಲ, ರಾಮದುರ್ಗ, ಸವದತ್ತಿ ತಾಲ್ಲೂಕುಗಳನ್ನು ಅಂತರ್ಜಲ ಅತಿಬಳಕೆಯ ಪ್ರದೇಶಗಳೆಂದು ಗುರುತಿ­ಸ­ಲಾಗಿದೆ. ಇಲ್ಲಿ ಮನಬಂದಂತೆ ಯಾರೂ ಕೊಳವೆಬಾವಿಗಳನ್ನು ಕೊರೆಯುವುದಕ್ಕೆ ಅವಕಾಶವಿಲ್ಲ. ಇಲ್ಲಿ ಕೊಳವೆಬಾವಿ ಕೊರೆ­ಯಲು ಜಿಲ್ಲಾಮಟ್ಟದ ಸಮಿತಿ­ಯಿಂದ  ಅನುಮತಿ ಪಡೆಯುವುದನ್ನು 2013ರ ಡಿಸೆಂಬರ್‌­ರಿಂದಲೇ ಕಡ್ಡಾಯ­ಗೊಳಿಸಿ ಆದೇಶಿಸ­ಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಕೊಳ­ವೆ­ಬಾವಿ ಕೊರೆ­ಯು­ವುದಕ್ಕೆ ನಿರ್ಬಂಧ­ ವೇನಿಲ್ಲ.

‘ಕೊಳವೆಬಾವಿ ಕೊರೆಸುವವರು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರುವುದಿಲ್ಲ. ಇದರಿಂದ, ಖಾಸಗಿಯ­ವರು ಕೊರೆಸಿದ ಎಷ್ಟು ಬೋರ್‌ವೆಲ್‌­ಗಳಿವೆ, ಅವುಗಳಲ್ಲಿ ವಿಫಲವಾಗಿದ್ದೆಷ್ಟು, ಯಶಸ್ವಿಯಾಗಿದ್ದೆಷ್ಟು ಎನ್ನುವ ಅಂಕಿ ಅಂಶವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಾಗಲೀ, ಜಿಲ್ಲಾ ಅಂತ­ರ್ಜಲ ಕಚೇರಿಯಲ್ಲಾಗಲೀ ಕಲೆ ಹಾಕಿಲ್ಲ. ಜಿಲ್ಲಾಡಳಿತದಿಂದಲೂ ಯಾವುದೇ ಸಮೀಕ್ಷೆಯನ್ನೂ ನಡೆಸಿಲ್ಲ’ ಎಂದು ಅಂತ­ರ್ಜಲ ನಿರ್ದೇಶನಾಲಯದ ಜಿಲ್ಲಾ ಭೂವಿಜ್ಞಾನಿ ಅರುಣ್‌ ಹೇಳಿದರು.

ಒಬ್ಬರೇ ಭೂವಿಜ್ಞಾನಿ: ಜಿಲ್ಲೆಯಲ್ಲಿ ಹಿರಿಯ ಭೂವಿಜ್ಞಾನಿ ಹುದ್ದೆ ಖಾಲಿ ಇದ್ದು ಅನಧಿಕೃತ ಬೋರ್‌­ವೆಲ್‌­ಗಳಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಇಷ್ಟು ದೊಡ್ಡ ಜಿಲ್ಲೆಗೆ ಇರುವುದೇ ಇಂದೇ ಕಚೇರಿ; ಇರುವುದೊಬ್ಬರೇ ಭೂ­ವಿಜ್ಞಾನಿ! ಸಿಬ್ಬಂದಿ ಕೊರೆತೆಯನ್ನು ಜಿಲ್ಲಾ ಅಂತರ್ಜಲ ಕಚೇರಿ ಎದುರಿಸುತ್ತಿದೆ.

‘ಅಂತರ್ಜಲ ಅತಿಬಳಕೆ ಪ್ರದೇಶದಲ್ಲಿ ಕೊಳವೆಬಾವಿ ಕೊರೆಸುವುದಕ್ಕೆ ಸಂಬಂಧಿಸಿದಂತೆ 2014–15ರಲ್ಲಿ 374, 2015– 16ರಲ್ಲಿ 827, 2016–17ರಲ್ಲಿ ಈವರೆಗೆ 617 ಅರ್ಜಿಗಳು ಸಲ್ಲಿಕೆಯಾಗಿವೆ. ಸ್ಥಳ ಪರಿಶೀಲಿಸಿದ ನಂತರ, ಕೊಳವೆಬಾವಿ ಕೊರೆಸಲು ಅನುಮತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ಕೊಳವೆಬಾವಿ ಕೊರೆಸಿರುವುದು ಗಮನಕ್ಕೆ ಬಂದಿಲ್ಲ. ಎಲ್ಲಿಯೂ ಜಪ್ತಿ ಮಾಡಿಲ್ಲ’ ಎಂದು ಅರುಣ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.