ADVERTISEMENT

ಮಠಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ

ಶರಣ ಸಂಸ್ಕೃತಿ ಉತ್ಸವ- 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:27 IST
Last Updated 31 ಜನವರಿ 2017, 6:27 IST
ಗೋಕಾಕ ಶೂನ್ಯ ಸಂಪಾದನಮಠದ  ಲಿಂಗೈಕ್ಯ ಬಸವ ಮಹಾಸ್ವಾಮಿಗಳ 12ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಭಾನುವಾರ ಆರಂಭಗೊಂಡ 6 ದಿನಗಳ ಶರಣ ಸಂಸ್ಕೃತಿ ಉತ್ಸವ-2017ನ್ನು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು. ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ತಳದಪ್ಪ ಅಮ್ಮಣಗಿ, ಬಾಳಪ್ಪ ಬೆಳಕೂಡ  ಇದ್ದಾರೆ
ಗೋಕಾಕ ಶೂನ್ಯ ಸಂಪಾದನಮಠದ ಲಿಂಗೈಕ್ಯ ಬಸವ ಮಹಾಸ್ವಾಮಿಗಳ 12ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಭಾನುವಾರ ಆರಂಭಗೊಂಡ 6 ದಿನಗಳ ಶರಣ ಸಂಸ್ಕೃತಿ ಉತ್ಸವ-2017ನ್ನು ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು. ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ತಳದಪ್ಪ ಅಮ್ಮಣಗಿ, ಬಾಳಪ್ಪ ಬೆಳಕೂಡ ಇದ್ದಾರೆ   

ಗೋಕಾಕ: ಸರ್ವ ಸಮಾಜಗಳ ಏಳ್ಗೆಗಾಗಿ ಸದಾ ಚಿಂತನೆ ಮಾಡುವ  ಶೂನ್ಯ ಸಂಪಾದನಮಠಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ಉತ್ಸುಕನಾಗಿದ್ದೇನೆ ಎಂದು ಸಣ್ಣ ಕೈಗಾರಿಕೆ  ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿಯ  ಶೂನ್ಯ ಸಂಪಾದನ ಮಠದಲ್ಲಿ ಭಾನುವಾರ  ನಡೆದ ಲಿಂಗೈಕ್ಯ ಬಸವ ಸ್ವಾಮೀಜಿ ಅವರ 12ನೇ ಪುಣ್ಯಸ್ಮರಣೋತ್ಸವ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ-2017ರ ಅಂಗವಾಗಿ ಏರ್ಪಡಿಸಿದ್ದ ‘ಜನಪದ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.

ಮಠದಿಂದ ಎಲ್ಲ ಬಗೆಯ ಹಾಗೂ ಜನಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಳು ವಂತೆ ಎಲ್ಲರನ್ನು ಆಹ್ವಾನಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿರು ವುದು ಪ್ರಗತಿಯ ಧ್ಯೋತಕ  ಎಂದು ಬಣ್ಣಿಸಿದರು. 

ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಮಾಸ್ಟರ್ ಪ್ಲ್ಯಾನ್‌ ಯೋಜನೆ ಅನುಷ್ಠಾನ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯ ಗಳಲೂ ಶೂನ್ಯ ಸಂಪಾದನಮಠ ತನ್ನ ಸಹಕಾರ ನೀಡುತ್ತಾ ಬಂದಿದೆ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ತುಕಾರಾಮ ಕಾಗಲ ಮಾತನಾಡಿ, ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಮಠ-ಮಾನ್ಯಗಳ ಕಾರ್ಯ ಸ್ತುತ್ಯಾರ್ಹ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿ ಹೊಸದುರ್ಗ ಭಗೀರಥ ಪೀಠದ  ಪುರುಷೋತ್ತ ಮಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕ ನಿಷ್ಠೆ, ಸಮಾಜಿಕ ಕಳಕಳಿಯಿಂದ ಕೂಡಿದ ಪ್ರಗತಿಪರ ನಿಲುವು ಹಾಗೂ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಜನಪದ ಕಲೆಯನ್ನು ಪ್ರೊತ್ಸಾಹಿಸುವ ದಿಶೆಯಲ್ಲಿ  ಶೂನ್ಯ ಸಂಪಾದನಮಠದ ಕಾರ್ಯ ಸ್ವಾಗತಾರ್ಹ ಎಂದರು.

ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಡ್ಡೆಪ್ಪ ತೋಳಿನವರ, ಡಾ. ಮಹೇಶಕುಮಾರ ಉಮರಾಣಿ, ನಗರಸಭೆ ಸದಸ್ಯರಾದ ಎಸ್.ಎ. ಕೋತವಾಲ, ಪರಶುರಾಮ ಭಗತ್, ಶಿವಶರಣ ಹಡಪದ ಅಪ್ಪಣ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಭುದೇವ ಹಡಪದ, ವಿರೂಪಾಕ್ಷಪ್ಪ ಕೊಟ್ರಶೆಟ್ಟಿ ಮುಂತಾದವರನ್ನು ಗೌರವಿಸಲಾಯಿತು.

ಶರಣ ಸಂಸ್ಕೃತಿ ಉತ್ಸವ–2017 ಅಂಗವಾಗಿ  ನಡೆದ ‘ಜನಪದ ಗೋಷ್ಠಿ’ಯಲ್ಲಿ ಅಥಣಿಯ ರಾಧಾಬಾಯಿ ಮಾದರ ಹಾಗೂ ಸಂಗಡಿಗರು ಚೌಡಕಿಪದ ಹಾಗೂ ಹುಲಕಂದದ ಕಮಾಲಸಾಬ ಹಾಗೂ ಸಂಗಡಿಗರು ನಡೆಸಿಕೂಟ್ಟ ಗೀಗೀಪದ ಹಾಗೂ ಕೊಳವಿ ಗ್ರಾಮದ ಶಿವಬಸು ಅಂಗಡಿ ಅವರ ಜನಪದ ಗೀತೆಗಳಿಗೆ ಜನರು ತಲೆದೂಗಿದರು.
ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ದುಂಡಪ್ಪಾ ಕಿರಗಿ ನೆರವೇರಿಸಿದರು. ಬೆಳಿಗ್ಗೆ 9ಕ್ಕೆ ಮಕ್ಕಳ  ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ. ಕಡಾಡಿ, ಡಾ. ಗುಡಗುಡಿ ಹಾಗೂ ಡಾ. ಹಳೀಗೌಡರ 100ಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

ಮುರುಘರಾಜೇಂದ್ರ ಸ್ವಾಮೀಜಿ, ನಾಯಕ ಸಮಾಜ ತಾಲ್ಲೂಕು ಅಧ್ಯಕ್ಷ ಲಕ್ಕಪ್ಪ ಪೂಜಾರಿ, ಅರಣ್ಯ ಅಧಿಕಾರಿ ಎಂ.ಕೆ.ಪಾತ್ರೋಟ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನಗರ ಯೋಜನಾ ವಿಭಾಗದ ಉಪ–ನಿರ್ದೇಶಕ ಬಿ.ವಿ.ಹಿರೇಮಠ, ಚಿಕ್ಕೋಡಿ ರೇಷ್ಮೆ ಇಲಾಖೆಯ ಶಿವಾನಂದ ಹಿರೇಮಠ ಇದ್ದರು.  ಶರಣ ಸಂಸ್ಕೃತಿ ಉತ್ಸವ ಸ್ವಾಗತ ಸಮೀತಿ ಅಧ್ಯಕ್ಷ ಬಾಳಪ್ಪ ಬೆಳಕೂಡ ಸ್ವಾಗತಿಸಿದರು, ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿ, ವಂದಿಸಿದರು.

ಮಹಿಳಾ ಗೋಷ್ಠಿ
ಶರಣ ಸಂಸ್ಕೃತಿ ಉತ್ಸವದ ಎರಡಬನೇ ದಿನ ಮಹಿಳಾ ಗೋಷ್ಠಿಯನ್ನು  ಚನ್ನಬಸವೇಶ್ವರ ವಿದ್ಯಾಪೀಠ ಶಾಲಾ ಆರವಣದಲ್ಲಿ ಸಂಜೆ 6ಕ್ಕೆ ಆಯೋಜಿಸಲಾಗಿದೆ. ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ಅಧ್ಯಕ್ಷತೆ ವಹಿಸುವರ. ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ವೈದ್ಯೆ ಡಾ. ಮಯೂರಿ ಕಡಾಡಿ, ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT